ಕೃಷಿ ಕಾಯ್ದೆ ವಿರುದ್ಧದ ಪ್ರತಿಭಟನೆಯ 2ನೇ ವರ್ಷಾಚರಣೆ: ರೈತರಿಂದ ರಾಜಭವನಕ್ಕೆ ರ‍್ಯಾಲಿ

Update: 2022-11-27 17:01 GMT

ಹೊಸದಿಲ್ಲಿ, ನ. 27:  33 ರೈತ ಒಕ್ಕೂಟಗಳಿಗೆ ನಿಷ್ಠೆ ಹೊಂದಿರುವ ಪಂಜಾಬ್‌ನ ಸಾವಿರಾರು ರೈತರು ತಮ್ಮ ಬೇಡಿಕೆಗಳ ಮನವಿ ಸಲ್ಲಿಸಲು ಶನಿವಾರ ಮೊಹಾಲಿಯಿಂದ ಚಂಡಿಗಢದಲ್ಲಿರುವ ಪಂಜಾಬ್ ರಾಜಭವನಕ್ಕೆ ರ‍್ಯಾಲಿ ನಡೆಸಿದರು. ಆದರೆ, ಪಂಜಾಬ್-ಚಂಡಿಗಢ ಗಡಿಯಲ್ಲಿ ಅವರನ್ನು ತಡೆದು ನಿಲ್ಲಿಸಲಾಯಿತು. 

ಇದೇ ರೀತಿ ಹರ್ಯಾಣದ 15 ರೈತ ಒಕ್ಕೂಟಗಳ ರೈತರು ಪಂಚಕುಲದಿಂದ ಹರ್ಯಾಣದ ರಾಜಭವನಕ್ಕೆ ರ್ಯಾಲಿ ನಡೆಸಿದರು. ಅವರನ್ನು ಕೂಡ ಚಂಡಿಗಢ-ಹರ್ಯಾಣ ಗಡಿಯಲ್ಲಿ ತಡೆದು ನಿಲ್ಲಿಸಲಾಯಿತು. 

ಕೇಂದ್ರ ಸರಕಾರದ ಕೃಷಿ ಕಾಯ್ದೆಯ ವಿರುದ್ಧದ ಚಳುವಳಿಯ ಎರಡನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ರಾಷ್ಟ್ರ ವ್ಯಾಪಿ ರ್ಯಾಲಿ ನಡೆಸಲು ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ 24ಕ್ಕೂ ಅಧಿಕ ರಾಜ್ಯಗಳಲ್ಲಿ ರೈತರು ಶನಿವಾರ ರ್ಯಾಲಿ ನಡೆಸಿದರು. 

ತಮ್ಮ ಬೇಡಿಕೆಯ ಮನವಿ ಸಲ್ಲಿಸಲು ಎಸ್‌ಕೆಎಂ ಅಡಿಯಲ್ಲಿ ರೈತರು ಮೊಹಾಲಿಯ ಗುರುದ್ವಾರ್ ಅಂಬ್ ಸಾಹಿಬ್‌ನಿಂದ ಚಂಡಿಗಢದ ಪಂಜಾಬ್ ರಾಜ್‌ಭವನಕ್ಕೆ ರ್ಯಾಲಿ ನಡೆಸಿದರು. ಆದರೆ, ಅವರನ್ನು ಚಂಡಿಗಢ ಗಡಿಯಲ್ಲಿ ತಡೆ ಹಿಡಿಯಲಾಯಿತು. ಅವರ ಪ್ರತಿನಿಧಿಗಳನ್ನು ಮಾತ್ರ ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್‌ರನ್ನು ಭೇಟಿಯಾಗಲು ಕರೆದೊಯ್ಯಲಾಯಿತು.

ಎಸ್‌ಕೆಎಂನ ಹಿರಿಯ ನಾಯಕ ಹಾಗೂ ಬಿಕೆಯು (ಲಾಖೋವಾಲ್) ಪ್ರಧಾನ ಕಾರ್ಯದರ್ಶಿ ಹರಿಂದರ್ ಸಿಂಗ್ ಲಾಖೋವಾಲ್, ‘‘ನಾವು ರಾಜ್ಯಪಾಲರಿಗೆ ನೀಡಿದ ಮನವಿಯಲ್ಲಿ 7 ಬೇಡಿಕೆಗಳು ಇವೆ. ನಮ್ಮ ಮನವಿಯನ್ನು ಶಿಫಾರಸಿಗಾಗಿ ನಾಳೆ ರಾಷ್ಟ್ರಪತಿಯವರಿಗೆ ಕಳುಹಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ನಮ್ಮ ಬೇಡಿಕೆ ಶೇ. ಸಿ2+50 ಫಾರ್ಮುಲಾದದೊಂದಿಗೆ  ಕನಿಷ್ಠ ಬೆಂಬಲ ಬೆಲೆಗೆ ಖಾತರಿ ಕಾನೂನನ್ನು ಒಳಗೊಂಡಿದೆ’’ ಎಂದರು. 

ನಮ್ಮ ಇತರ ಬೇಡಿಕೆಗಳೆಂದರೆ ರೈತರ ಸಾಲ ಮನ್ನಾ, 2022ರ ವಿದ್ಯುತ್ ತಿದ್ದುಪಡಿ ಮಸೂದೆ ಹಿಂದೆ ತೆಗೆಯುವುದು, ಲಖಿಂಪುರಖೇರಿ ಹಿಂಸಾಚಾರದ ಪ್ರಧಾನ ಪಿತೂರಿಗಾರನ ವಿರುದ್ಧ ಕ್ರಮ,  ಕೇಂದ್ರದ ಸಹಾಯಕ ಸಚಿವ ಅಜಯ್ ಮಿಶ್ರಾ ತೇನಿ ಬಂಧನ, ವಜಾ ಹಾಗೂ  ನಕಲಿ ಪ್ರಕರಣದಲ್ಲಿ ಸಿಲುಕಿಸಿ ಬಂಧಿಸಲಾದ ನಾಲ್ವರು ರೈತರ ಬಿಡುಗಡೆ’’ ಎಂದು ಅವರು ಹೇಳಿದ್ದಾರೆ. 

ಎಸ್‌ಕೆಎಂನ ಹಿರಿಯ ನಾಯಕ ದರ್ಶನ್ ಪಾಲ್, ಎಸ್‌ಕೆಎಂನ ಮುಂದಿನ ಸಭೆ ಹರ್ಯಾಣದ ಕರ್ನಾಲ್‌ನಲ್ಲಿ ಡಿಸೆಂಬರ್ 8ರಂದು ನಡೆಯಲಿದೆ. ಅಲ್ಲಿ ಹೋರಾಟದ ಮುಂದಿನ ಹಂತವನ್ನು ನಿರ್ಧರಿಸಲಾಗುವುದು ಎಂದಿದ್ದಾರೆ. ಈ ಹೋರಾಟದಲ್ಲಿ ಕೂಡ ಮುಂದೆ ಬಂದು ಪ್ರಧಾನ ಪಾತ್ರ ವಹಿಸುವಂತೆ  ಅವರು ರೈತರನ್ನು ಆಗ್ರಹಿಸಿದ್ದಾರೆ. 

Similar News