ಎಲ್ಲರಿಗೂ ಮೀಸಲಾತಿ ಹೆಚ್ಚಳ ಸಾಧ್ಯವಿಲ್ಲ: ಸಂಸದ ವಿ.ಶ್ರೀನಿವಾಸ್ ಪ್ರಸಾದ್

Update: 2022-11-28 17:16 GMT

ಮೈಸೂರು,ನ.28: ಶೋಷಿತ ಸಮುದಾಯಗಳನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಮುನ್ನಲೆಗೆ ತರುವ ಉದ್ದೇಶದಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮೀಸಲಾತಿಯನ್ನು ಜಾರಿಗೊಳಿಸಿದ್ದರು. ಆದರೆ ಎಲ್ಲರಿಗೂ ಮೀಸಲಾತಿ ಹೆಚ್ಚಳ ಸಾಧ್ಯವಿಲ್ಲ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದರು.

ನಂಜನಗೂಡು ನಗರದ ಶ್ರೀ ಶ್ರೀಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಸೋಮವಾರ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವ ವೇಳೆ ಭಾಗವಹಿಸಿ ಮಾತನಾಡಿದ ಅವರು, ಈಗ ಇತರೆ ಸಮುದಾಯಗಳೂ ಮೀಸಲಾತಿ ಹೆಚ್ಚಳ ಮಾಡುವಂತೆ ಒತ್ತಡ ಹಾಕುತ್ತಿದ್ದು, ಎಲ್ಲರಿಗೂ ಮೀಸಲಾತಿ ಹೆಚ್ಚಳ ಮಾಡಲು ಒತ್ತಡ ತರುತ್ತಿದ್ದಾರೆ. ಇದು ಸಾಧ್ಯವಿಲ್ಲ ಎಂದು ಹೇಳಿದರು. 

ರಾಜಕಾರಣಕ್ಕೆ ಬಂದು ನಾಲ್ಕು ದಶಕಗಳು ಕಳೆದಿವೆ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಮಂತ್ರಿಯಾಗಿದ್ದೇನೆ. ಕೆಲವು ಚುನಾವಣೆಯಲ್ಲಿ ಸೋಲನ್ನು ಕಂಡಿದ್ದೇನೆ. ಸೋತಾಗ ಕುಗ್ಗಿಲ್ಲ , ಗೆದ್ದಾಗ ಹಿಗ್ಗಿಲ್ಲ ಎಂದರು.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಾಜದ ಎಲ್ಲಾ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗುದುಕೊಂಡು ಕೆಲಸ ಮಾಡುತಿದ್ದಾರೆ. ಪರಿಶಿಷ್ಟ ಸಮುದಾಯಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡುವ ಮೂಲಕ ಸರ್ವರನ್ನು ಒಳಗೊಳ್ಳುವಂತಹ ಆಡಳಿತ ನೀಡಿದ್ದಾರೆ.

ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವಾಲಯ ಪ್ರವಾಹ ಬಂದಾಗ ಕಬಿನಿ ಜಲಾಶಯದ ನೀರು ನುಗ್ಗಿ ಅಪಾರ ಹಾನಿವುಂಟಾಗುತ್ತಿದೆ. ಆದ್ದರಿಂದ ಕೂಡಲೆ ಕಬಿನಿ ಜಲಾಶಯಕ್ಕೆ ತಡೆಗೋಡೆ ನಿರ್ಮಾಣ ಮಾಡಬೇಕು ಎಂದು ಮುಂಖ್ಯಮತ್ರಿಗಳ ಬಳಿ ಮನವಿ ಮಾಡಿದರು.

Similar News