ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಪ್ರಾಥಮಿಕ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ ರದ್ದು: ಕೇಂದ್ರ

Update: 2022-11-28 18:40 GMT

ಹೊಸದಿಲ್ಲಿ: ಒಂದರಿಂದ ಎಂಟನೇ ತರಗತಿವರೆಗಿನ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಸ್ಕಾಲರ್‌ಶಿಪ್ ಅನ್ನು ಇನ್ನು ಮುಂದೆ ನೀಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಈ ಕುರಿತು ರಾಷ್ಟ್ರೀಯ ವಿದ್ಯಾರ್ಥಿವೇತನ ವೆಬ್‌ ಪೋರ್ಟಲ್‌ನಲ್ಲಿ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದ್ದು, “9 ಮತ್ತು 10 ನೆಯ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಮಾತ್ರ ʼಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಮೆಟ್ರಿಕ್ ಪೂರ್ವ ಸ್ಕಾಲರ್‌ಶಿಪ್ ಯೋಜನೆʼ ಹಾಗೂ ʼಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಯೋಜನೆʼಯ ಫಲಾನುಭವಿಗಳಾಗುತ್ತಾರೆ” ಎಂದು ತಿಳಿಸಿದೆ.

ಕೇಂದ್ರದ ನಿರ್ಧಾರವನ್ನು ಸಮರ್ಥಿಸಿರುವ ಉತ್ತರ ಪ್ರದೇಶದ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಧರಂಪಾಲ್ ಸಿಂಗ್, “ಶಿಕ್ಷಣ ಹಕ್ಕು ಕಾಯಿದೆಯ ಪ್ರಕಾರ, (1 ರಿಂದ 8 ರವರೆಗಿನ) ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ, ಆದ್ದರಿಂದ 1 ರಿಂದ 8 ನೇ ತರಗತಿಯವರೆಗೆ ವಿದ್ಯಾರ್ಥಿ ವೇತನವನ್ನು ನೀಡುವ ಯಾವುದೇ ಅಗತ್ಯ ಇಲ್ಲ” ಎಂದು ಹೇಳಿದ್ದಾರೆ.

ವಿದ್ಯಾರ್ಥಿವೇತನವನ್ನು ಶಿಕ್ಷಣದ ಹಕ್ಕಿನಡಿ ನೋಡಬೇಕೇ ಹೊರತು, ಹೆಚ್ಚುವರಿ ಸವಲತ್ತು ಎಂದು ನೋಡಬಾರದು: ಎಸ್‌ಐಒ

ಸ್ಕಾಲರ್‌ ಶಿಪ್‌ ತಡೆದ ಕೇಂದ್ರದ ನಿರ್ಧಾರವನ್ನು ವಿದ್ಯಾರ್ಥಿ ಸಂಘಟನೆ ಎಸ್‌ಐಒ ಖಂಡಿಸಿದ್ದು, “ಈ ವರ್ಷ ಸ್ವೀಕೃತವಾದ ಅರ್ಜಿಗಳಲ್ಲಿ ಕೇವಲ 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳನ್ನು ಸ್ಕಾಲರ್ಶಿಪ್ ಗೆ ಪರಿಗಣಿಸಲಾಗುವುದು ಎಂಬ ಸೂಚನೆಯು ಆಘಾತಕಾರಿಯಾಗಿದೆ” ಎಂದು ಹೇಳಿದೆ.

“ಸಂವಿಧಾನದ ಶಿಕ್ಷಣ ಹಕ್ಕನ್ನು ಸರ್ವ ರೀತಿಯಿಂದಲೂ ಅನುಷ್ಠಾನಕ್ಕೆ ತರಲು ಸಹಕಾರಿಯಾಗಿದ್ದ ಸ್ಕಾಲರ್ಶಿಪ್ ನಂತಹ ಉತ್ತೇಜನವನ್ನು ಸರ್ಕಾರ ಇನ್ನೂ ಮುಂದೆ ನಿಲ್ಲಿಸಿದರೆ, ಸಂವಿಧಾನದ ಮೂಲಭೂತ ಹಕ್ಕಾದ ಶಿಕ್ಷಣದ ಹಕ್ಕನ್ನು ಸಾಧಿಸಲು ಸಾಧ್ಯವಾಗುವುದಿಲ್ಲ, ಕೇಂದ್ರದ ಇಂತಹ ನಡೆಯು ಶಿಕ್ಷಣದ ಹಕ್ಕನ್ನು ಸಂಕುಚಿತಗೊಳಿಸುವ ಮತ್ತು ಅದನ್ನು ದುರ್ಬಲಗೊಳಿಸುವ ಪ್ರಯತ್ನವಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ವಿವಿಧ ಇಲಾಖೆಯಡಿಯಲ್ಲಿ ಅರ್ಜಿ ಸಲ್ಲಿಸಿದ್ದ ದೇಶದ ಲಕ್ಷಾಂತರ ವಿದ್ಯಾರ್ಥಿಗಳು ಅನ್ಯಾಯಕ್ಕೆ ಒಳಗಾಗಲಿದ್ದಾರೆ ಮತ್ತು ಬಡ ಕುಟುಂಬದ ಹಿನ್ನೆಲೆಯುಳ್ಳ ವಿದ್ಯಾರ್ಥಿಗಳು ಸೌಲಭ್ಯ ವಂಚಿತರಾಗಲಿದ್ದಾರೆ, ಇದು ಮಕ್ಕಳನ್ನು ಶಾಲೆಯಿಂದ ಹೊರಗುಳಿಯುವಂತೆ ಮಾಡಲಿದೆ, ಬಹುತೇಕ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಮಕ್ಕಳನ್ನು ಸ್ಕಾಲರ್ಶಿಪ್ ನೀಡುತ್ತಿದ್ದರಿಂದ ಶಾಲೆಗಳಿಗೆ ಕಳಿಸುತ್ತಿದ್ದರು, ಮಕ್ಕಳನ್ನು ಶಾಲೆಗೆ ಕರೆತರಲು ಅನುಕೂಲವಾಗಿದ್ದ ಸ್ಕಾಲರ್ಶಿಪ್ ಸೌಲಭ್ಯವನ್ನು ಮೂಲಭೂತ ಹಕ್ಕಾದ ಶಿಕ್ಷಣದ ಹಕ್ಕಿನಡಿ ನೋಡಬೇಕೇ ಹೊರತು ಈ ಸೌಲಭ್ಯವು ಹೆಚ್ಚುವರಿ ಸವಲತ್ತು ಎನ್ನುವ ರೀತಿಯಲ್ಲಿ ನೋಡುವುದು ಸರಿಯಲ್ಲ, ಈ ಸುತ್ತೋಲೆಯು ಮಕ್ಕಳನ್ನು ಶಾಲೆಯಿಂದ ಹೊರಗುಳಿಯುವಂತೆ ಮಾಡಲಿದೆ ಎನ್ನುವ ಆತಂಕವಿದೆ. 1 ರಿಂದ 8 ನೇ ತರಗತಿಯ ಮಕ್ಕಳಿಗೆ ಸಂವಿಧಾನದ ಮೂಲಭೂತ ಹಕ್ಕಾದ ಶಿಕ್ಷಣದ ಹಕ್ಕಿನ (RTE) ಭಾಗವಾಗಿ ಅವರಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಸರ್ಕಾರ ನೀಡುತ್ತಿದ್ದು, ಆದ್ದರಿಂದ ಈ ಮಕ್ಕಳಿಗೆ ನೀಡಲಾಗುತ್ತಿರುವ ಶಿಷ್ಯವೇತನವನ್ನು ಇನ್ನೂ ಮುಂದೆ ಮುಂದುವರೆಸುವುದಿಲ್ಲ ಎಂಬ ಕೇಂದ್ರದ ನಡೆಯು ಶಿಕ್ಷಣದ ವಿರೋಧಿಯಾಗಿದೆ. 6 ರಿಂದ 14 ವರ್ಷದ ಮಕ್ಕಳ ಶಾಲಾ ದಾಖಲಾತಿಯನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಶಿಷ್ಯವೇತನವು ಮಕ್ಕಳ ಶಾಲಾ ದಾಖಲಾತಿ ಮತ್ತು ಸಕ್ರಿಯ ಶಾಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಉತ್ತೇಜನ ನೀಡುವುದಾಗಿದೆ, ಆದ್ದರಿಂದ ಕೇಂದ್ರದ ಈ ಸೂಚನೆಯನ್ನು ಎಸ್.ಐ.ಓ ಕರ್ನಾಟಕವು ಖಂಡಿಸುತ್ತದೆ ಮತ್ತು ಇದನ್ನು ಹಿಂಪಡೆಯಬೇಕೆಂದು” ರಾಜ್ಯ ಕಾರ್ಯದರ್ಶಿ ಮಹಮ್ಮದ್ ಪೀರ್ ಲಟಗೇರಿ ಅವರು ಆಗ್ರಹಿಸಿದ್ದಾರೆ.

Similar News