ಫಿಫಾ ವಿಶ್ವಕಪ್: ವೇಲ್ಸ್ ವಿರುದ್ಧ ಭರ್ಜರಿ ಜಯದೊಂದಿಗೆ ಪ್ರಿ-ಕ್ವಾರ್ಟರ್‌ಗೆ ಇಂಗ್ಲೆಂಡ್ ಲಗ್ಗೆ

Update: 2022-11-30 01:54 GMT

ಹೊಸದಿಲ್ಲಿ: ಪಂದ್ಯದ ಉತ್ತರಾರ್ಧದಲ್ಲಿ ಮಾಕ್ರ್ಯೂಸ್ ರಷ್‍ಫೋಲ್ಡ್ ಎರಡು ಗೋಲುಗಳನ್ನು ಗಳಿಸುವ ಮೂಲಕ ವೇಲ್ಸ್ ವಿರುದ್ಧದ ಫಿಫಾ ವಿಶ್ವಕಪ್ ಗುಂಪು ಹಂತದ ಪಂದ್ಯದಲ್ಲಿ 3-0 ಸುಲಭ ಜಯ ಸಾಧಿಸಿದ ಇಂಗ್ಲೆಂಡ್, ಪ್ರಿ ಕ್ವಾರ್ಟರ್ ಹಂತಕ್ಕೆ ಲಗ್ಗೆ ಇಟ್ಟಿದೆ.

ಇದರೊಂದಿಗೆ ನಾಕೌಟ್ ಹಂತ ತಲುಪುವ ವೇಲ್ಸ್ ಆಸೆ ನುಚ್ಚು ನೂರಾಯಿತು. ಮೂರು ಪಂದ್ಯಗಳಿಂದ ಏಳು ಅಂಕ ಪಡೆದ ಇಂಗ್ಲೆಂಡ್ ತಂಡ ಬಿ ಗುಂಪಿನ ಅಗ್ರಸ್ಥಾನಿಯಾಗಿ ಮುಂದಿನ ಹಂತಕ್ಕೆ ತೇರ್ಗಡೆಯಾಯಿತು.

ರಷ್‍ಫೋಲ್ಡ್ ಅವರ ಅವಳಿ ಗೋಲಿನ ಜತೆಗೆ ಫಿಲ್ ಫೋಡೆನ್ ಕೂಡಾ ತಂಡದ ಪರ ಗೋಲು ಸಾಧಿಸಿ ಅಹ್ಮದ್ ಅಲಿ ಸ್ಟೇಡಿಯಂನಲ್ಲಿ ಸೇರಿದ್ದ ಅಪಾರ ಅಭಿಮಾನಿಗಳ ಸಂಭ್ರಮಕ್ಕೆ ಕಾರಣರಾದರು.

ಮೊದಲಾರ್ಧದಲ್ಲಿ ಸಮಬಲದ ಹೋರಾಟ ಕಂಡುಬಂದರೂ ಯಾವುದೇ ಗೋಲು ಬರಲಿಲ್ಲ. ಉತ್ತರಾರ್ಧದಲ್ಲಿ 50ನೇ ನಿಮಿಷದಲ್ಲಿ ರಷ್‍ಫೋರ್ಡ್ ಅವರು ಫ್ರೀ ಕಿಕ್ ಅನ್ನು ಗೋಲಾಗಿ ಪರಿವರ್ತಿಸುವ ಮೂಲಕ ಪಂದ್ಯಕ್ಕೆ ಜೀವ ತುಂಬಿದರು.

ಇದಾದ ಒಂದು ನಿಮಿಷದಲ್ಲೇ ಫೋಡೆನ್, ಹ್ಯಾರಿ ಕೇನ್ ಅವರ ಕ್ರಾಸ್ ಹೊಡೆತವನ್ನು ಗೋಲಾಗಿ ಪರಿವರ್ತಿಸಿದರು. 68ನೇ ನಿಮಿಷದಲ್ಲಿ ಗೋಲ್‍ ಕೀಪರ್ ಡ್ಯಾನಿ ಅವರ ಕಾಲುಗಳ ಸಂದಿಯಲ್ಲಿ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದ ರಷ್‍ಫೋಲ್ಡ್ ಗೆಲುವಿನ ಅಂತರವನ್ನು ಹಿಗ್ಗಿಸಿದರು.

1984ರಿಂದೀಚೆಗೆ ಮೊದಲ ಬಾರಿಗೆ ನಾಕೌಟ್ ತಲುಪುವ ವೇಲ್ಸ್ ಕನಸು ನನಸಾಗಬೇಕಿದ್ದರೆ, ಅಸಾಧ್ಯ ಎನಿಸಿದ 4 ಗೋಲುಗಳ ಅಂತರದ ಜಯವನ್ನು ಸಾಧಿಸಬೇಕಿತ್ತು. ಆದರೆ ರಕ್ಷಣಾತ್ಮಕ ಆಟದ ಮೂಲಕ ಮೊದಲಾರ್ಧದಲ್ಲಿ ಇಂಗ್ಲೆಂಡ್ ಆಟಗಾರರ ಬೆವರಿಳಿಸಿ ಒಂದೂ ಗೋಲುಗಳನ್ನು ಬಿಟ್ಟುಕೊಡದೇ ಗಮನ ಸೆಳೆಯಿತು.

Similar News