ಚಾಮರಾಜನಗರ | ಪೊಲೀಸ್ ಜೀಪ್‍ನಿಂದ ಹಾರಿದ ಆರೋಪಿ ಮೃತಪಟ್ಟ ಪ್ರಕರಣ: ಮೂವರು ಪೊಲೀಸರ ವಿರುದ್ಧ FIR

Update: 2022-11-30 09:27 GMT

ಚಾಮರಾಜನಗರ,ನ.30: ಪೊಲೀಸ್ ಜೀಪ್‍ನಿಂದ ಹಾರಿದ ಆರೋಪಿಯೋರ್ವ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸರ  ವಿರುದ್ಧ ಎಫ್‍ಐಆರ್ ದಾಖಲಾಗಿರುವುದು ವರದಿಯಾಗಿದೆ. 

ನಿಂಗರಾಜು (21) ಮೃತಪಟ್ಟ ಯುವಕನಾಗಿದ್ದು,  ಮೃತ ನಿಂಗರಾಜು ತಾಯಿ ಮಹದೇವಮ್ಮ ಅವರು ಯಳಂದೂರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆ ಮಾಡಿದ್ದರು. ಪೊಲೀಸರು ಮಗನನ್ನು ಕೊಲೆ ಮಾಡಿದ್ದಾರೆ ಎಂದು  ಅವರು ದೂರಿನಲ್ಲಿ ತಿಳಿಸಿದ್ದಾರೆ. 

ಎಫ್‍ಐಆರ್ ದಾಖಲು: ಪ್ರಕರಣಕ್ಕೆ ಸಂಬಂಧಿಸಿದಂತೆ ಯಳಂದೂರು ವೃತ್ತದ ಸಿಪಿಐ ಶಿವಮಾದಯ್ಯ, ಮಾಂಬಳ್ಳಿ ಠಾಣೆಯ ಎಸ್‍ಐ ಮಾದೇಗೌಡ, ಪೊಲೀಸ್ ಕಾನ್ಸ್‌ಟೇಬಲ್ ಸೋಮಣ್ಣ ವಿರುದ್ಧ ಎಫ್‍ಐಆರ್ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಘಟನೆ ವಿವರ: ಕೊಳ್ಳೇಗಾಲ ತಾಲೂಕು ಕುಂತೂರು ಮೋಳೆ ನಿವಾಸಿ ನಂಜುಂಡಶೆಟ್ಟಿ ಅವರ ಮಗ ನಿಂಗರಾಜು ಎಂಬಾತನ ವಿರುದ್ಧ ಬಾಲಕಿಯೊಬ್ಬಳ ಅಪಹರಣಕ್ಕೆ ಸಂಬಂಧಿಸಿದಂತೆ ಮಾಂಬಳ್ಳಿ ಠಾಣೆಯಲ್ಲಿ ಎಂಟು ದಿನಗಳ ಹಿಂದೆ ದೂರು ದಾಖಲಾಗಿತ್ತು.

ಯುವಕ ಹಾಗೂ ಬಾಲಕಿ ಚಾಮರಾಜನಗರದಲ್ಲಿ ಮಂಗಳವಾರ ಪತ್ತೆಯಾಗಿದ್ದರು. ಮಾಂಬಳ್ಳಿ ಪೊಲೀಸರು ಅವರನ್ನು ಪೊಲೀಸ್‌ ಜೀಪಿನಲ್ಲಿ ಮಾಂಬಳ್ಳಿ ಠಾಣೆಗೆ ಕರೆದೊಯ್ಯುತ್ತಿರುವಾಗ ಮದ್ದೂರು–ಯರಿಯೂರು ನಡುವೆ ಯುವಕ ಜೀಪಿನಿಂದ ಹೊರಗಡೆ ಹಾರಿದ್ದಾನೆ. ತಲೆ ರಸ್ತೆಗೆ ಬಿದ್ದಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ತಕ್ಷಣವೇ ಯಳಂದೂರು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ತೀವ್ರ ರಕ್ತಸ್ರಾವದಿಂದ ನಿಂಗರಾಜು ಮೃತಪಟ್ಟಿದ್ದಾನೆನ್ನಲಾಗಿದೆ.

Similar News