ಸತ್ಯ ಮಾತನಾಡುವ ಸಾಮರ್ಥ್ಯ ಕಳೆದುಕೊಳ್ಳುತ್ತಿರುವ ದೇಶಗಳಲ್ಲಿ ಯಾರಾದರೂ ಮಾತನಾಡಲೇಬೇಕು: ನಡಾವ್ ಲಪಿಡ್

‘ದಿ ಕಾಶ್ಮೀರ ಫೈಲ್ಸ್’ ಚಿತ್ರವನ್ನು ‘ಅಪಪ್ರಚಾರದ ಸರಕು’ ಎಂದಿದ್ದ ಇಸ್ರೇಲಿ ಚಿತ್ರ ನಿರ್ದೇಶಕ

Update: 2022-11-30 10:32 GMT

ಹೊಸದಿಲ್ಲಿ: ತಮ್ಮ ಮನಸ್ಸು ಬಿಚ್ಚಿ ನುಡಿಯುವ ಅಥವಾ ಸತ್ಯವನ್ನು ಮಾತನಾಡುವ ಸಾಮರ್ಥ್ಯವನ್ನು ದಿನೇದಿನೇ ಕಳೆದುಕೊಳ್ಳುತ್ತಿರುವ ದೇಶಗಳಲ್ಲಿ ಯಾರಾದರೂ ಮಾತನಾಡಲೇಬೇಕು ಎಂದು ಇಸ್ರೇಲಿ ಚಿತ್ರ ನಿರ್ದೇಶಕ ನಡಾವ್ ಲಪಿಡ್ ಹೇಳಿದ್ದಾರೆ ಎಂದು thewire.in ವರದಿ ಮಾಡಿದೆ.

ಗೋವಾದಲ್ಲಿ ನಡೆದಿದ್ದ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‌ಎಫ್‌ಐ)ದಲ್ಲಿ ಜ್ಯೂರಿಗಳ ಮುಖ್ಯಸ್ಥರಾಗಿದ್ದ ಲಪಿಡ್ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ವೇಳೆ ‘ದಿ ಕಾಶ್ಮೀರ ಫೈಲ್ಸ್’ ಚಿತ್ರವನ್ನು ‘ಅಪಪ್ರಚಾರದ ಸರಕು’ ಮತ್ತು ‘ಅಸಭ್ಯ’ ಎಂದು ಬಣ್ಣಿಸಿದ್ದರು. ‘‘ಚಲನಚಿತ್ರೋತ್ಸವದಲ್ಲಿ ‘ದಿ ಕಾಶ್ಮೀರ ಫೈಲ್ಸ್ ’ ಚಿತ್ರವು ಪ್ರದರ್ಶನಗೊಂಡಿದ್ದು ನಮ್ಮನ್ನು ವಿಚಲಿತರನ್ನಾಗಿಸಿದೆ,ನಮಗೆ ಆಘಾತವನ್ನುಂಟು ಮಾಡಿದೆ.

ಅದು ಅಪಪ್ರಚಾರದ ಸರಕು ಮತ್ತು ಅಸಭ್ಯ ಚಿತ್ರವಾಗಿ ನಮಗೆ ಭಾಸವಾಗಿದ್ದು,ಇಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ ಮತ್ತು ಸ್ಪರ್ಧಾತ್ಮಕ ವಿಭಾಕ್ಕೆ ಸೂಕ್ತ ಚಿತ್ರವಾಗಿರಲಿಲ್ಲ’’ ಎಂದೂ ಲಪಿಡ್ ಕಟುವಾಗಿ ಟೀಕಿಸಿದ್ದರು. ಹೇಳಿದ್ದರು. ‘ ಈ ಅಭಿಪ್ರಾಯವನ್ನು ಬಹಿರಂಗವಾಗಿ ನಿಮ್ಮಾಂದಿಗೆ ಹಂಚಿಕೊಳ್ಳಲು ನನಗೆ ಹಿಂಜರಿಕೆಯಿಲ್ಲ,ಏಕೆಂದರೆ ಕಲೆ ಮತ್ತು ಜೀವನಕ್ಕೆ ಅಗತ್ಯವಾದ ವಿಮರ್ಶಾತ್ಮಕ ಚರ್ಚೆಯನ್ನು ಈ ವೇದಿಕೆಯು ಖಂಡಿತವಾಗಿಯೂ ಸ್ವೀಕರಿಸುತ್ತದೆ ’ಎಂದೂ ಲಪಿಡ್ ಹೇಳಿದ್ದರು.

ಲಪಿಡ್ ತನ್ನ ಹೇಳಿಕೆಯ ಬೆನ್ನಲ್ಲೇ ಇಸ್ರೇಲಿ ಸುದ್ದಿಸಂಸ್ಥೆ ವೈನೆಟ್‌ನ್ಯೂಸ್‌ಗೆ ದೂರವಾಣಿ ಸಂದರ್ಶನವನ್ನು ನೀಡಿದಾಗ ಅವರ ಕುರಿತು ಹೆಚ್ಚಿನ ಟೀಕೆಗಳು ಇನ್ನೂ ಹೊರಬಿದ್ದಿರಲಿಲ್ಲ. 

ಭಾರತದಲ್ಲಿ ಇಸ್ರೇಲ್ ರಾಯಭಾರಿ ನವೋರ್ ಗಿಲೋನ್ ಅವರು ಚಲನಚಿತ್ರೋತ್ಸವದಲ್ಲಿ ಜ್ಯೂರಿಗಳ ಮುಖ್ಯಸ್ಥರಾಗಿ ಭಾರತದ ಆಹ್ವಾನವನ್ನು ಕೆಟ್ಟ ರೀತಿಯಲ್ಲಿ ದುರುಪಯೋಗಿಸಿಕೊಂಡಿದ್ದಕ್ಕಾಗಿ ಲಪಿಡ್ ಅವರಿಗೆ ನಾಚಿಕೆಯಾಗಬೇಕು ಎಂದು ತರಾಟೆಗೆತ್ತಿಕೊಂಡಿದ್ದರು.
ತಾನು ಹೇಳಿಕೆ ನೀಡಿದಾಗ ‘ದಿ ಕಾಶ್ಮೀರ ಫೈಲ್ಸ್ ’ಕುರಿತು ಸರಕಾರದ ನಿಲುವಿನ ಬಗ್ಗೆ ತನಗೆ ಚೆನ್ನಾಗಿ ಅರಿವಿತ್ತು ಎಂದು ಸುದ್ದಿಸಂಸ್ಥೆಗೆ ತಿಳಿಸಿದ ಲಪಿಡ್,ಕಾರ್ಯಕ್ರಮವು ದೂರದರ್ಶನದಲ್ಲಿ ನೇರ ಪ್ರಸಾರವಾಗುತ್ತಿತ್ತು. ಅದು ಸರಕಾರದ ಕಾರ್ಯಕ್ರಮವಾಗಿದ್ದು, ಭಾರತದಲ್ಲಿ ಅತ್ಯಂತ ದೊಡ್ಡ ಚಲನಚಿತ್ರೋತ್ಸವವಾಗಿತ್ತು. ಸರಕಾರವು ನಿಜಕ್ಕೂ ಚಾಲನೆ ನೀಡಿರದಿದ್ದರೆ,ಕನಿಷ್ಠ ಅದು ಚಿತ್ರವನ್ನು ಅಸಾಧಾರಣ ರೀತಿಯಲ್ಲಿ ಉತ್ತೇಜಿಸಿತ್ತು. ಏಕೆಂದರೆ ಚಿತ್ರವು ಕಾಶ್ಮೀರ ಕುರಿತು ಭಾರತದ ನೀತಿಯನ್ನು ಸಮರ್ಥಿಸುತ್ತದೆ ಮತ್ತು ಅದು ಫ್ಯಾಸಿಸ್ಟ್ ಲಕ್ಷಣಗಳನ್ನು ಹೊಂದಿದೆ ಎಂದರು.

ಶೀಘ್ರವೇ ‘ದಿ ಕಾಶ್ಮೀರ ಫೈಲ್ಸ್’ನಂತಹ ಇಸ್ರೇಲಿ ಚಿತ್ರವನ್ನು ಸುಲಭವಾಗಿ ಕಲ್ಪಿಸಿಕೊಳ್ಳಬಹುದು ಎಂದ ಲಪಿಡ್,‘ನಾನು ಚಿತ್ರವನ್ನು ವೀಕ್ಷಿಸಿದಾಗ ಅದರಲ್ಲಿಯ ಅಪಪ್ರಚಾರ ಮತ್ತು ಫ್ಯಾಸಿಸಂ ಮತ್ತು ಅಶ್ಲೀಲತೆಯ ಪಾರದರ್ಶಕ ಸಂಯೋಜನೆಯು ನನಗೆ ಆಘಾತವುಂಟು ಮಾಡಿತ್ತು ಎಂಬ ವಾಸ್ತವವನ್ನು ಮೀರಿ ಇನ್ನೊಂದೆರಡು ವರ್ಷಗಳಲ್ಲಿ ಇಂತಹುದೇ ಇಸ್ರೇಲಿ ಚಿತ್ರವು ಬರಬಹುದು ಎನ್ನುವುದನ್ನು ಊಹಿಸಿಕೊಳ್ಳದಿರಲು ನನಗೆ ಸಾಧ್ಯವಾಗಲಿಲ್ಲ ’ಎಂದರು.
ಐಎಫ್‌ಎಫ್‌ಐ ‘ಪ್ರತಿಯೊಬ್ಬರೂ ಸರಕಾರವನ್ನು ಹೊಗಳುವ ಕಾರ್ಯಕ್ರಮವಾಗಿದೆ ’,ಹೀಗಾಗಿ ಅದನ್ನು ಖಂಡಿಸುವುದರಲ್ಲಿ ಅಪಾಯಗಳಿವೆ ಎನ್ನುವುದು ತನಗೆ ತಿಳಿದಿತ್ತು ಎಂದು ಲಪಿಡ್ ಹೇಳಿದರು.

ತನ್ನ ಟೀಕೆಗಳಿಗಾಗಿ ಜನರು ತನ್ನನ್ನು ಅಭಿನಂದಿಸಿದ್ದರು ಮತ್ತು ಇಸ್ರೇಲ್ ಕೂಡ ಶೀಘ್ರವೇ ಭಾರತದಂತಹ ಸ್ಥಿತಿಯನ್ನು ಎದುರಿಸಲಿದೆ ಎಂಬ ಯೋಚನೆ ತನ್ನನ್ನು ಕಾಡಿತ್ತು ಎಂದರು.

Similar News