ಗೋ ಮಾತೆ ಹೆಸರಿನಲ್ಲೂ ಲೂಟಿ: ರಾಜ್ಯ ಸರಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ಆರೋಪ

Update: 2022-11-30 11:11 GMT

ಬೆಂಗಳೂರು, ನ.30: ''ರಾಜ್ಯ ಬಿಜೆಪಿ ಸರ್ಕಾರ ಯಾರನ್ನೂ ಬಿಡುವುದಿಲ್ಲ, ಗೋಮಾತೆ ಹೆಸರಿನಲ್ಲೂ ಲೂಟಿ ಮಾಡುತ್ತಿದ್ದಾರೆ'' ಎಂದು ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಅವರು ಕಿಡಿಕಾರಿದ್ದಾರೆ. 

ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಗೋಹತ್ಯೆ ನಿಷೇಧ ಕಾಯ್ದೆಯನ್ನು ಅಂದು ಬಿಜೆಪಿ ಶಾಸಕರು ಕೇಸರಿ ಶಾಲು ಧರಿಸಿ, ಜೈ ಶ್ರೀರಾಮ್ ಎಂದು ಕೂಗಿ, ಮೇಜು ಕುಟ್ಟಿ ಗೋಮಾತೆ ಪೂಜೆ ಮಾಡಿ ಜಾರಿಗೆ ತಂದರು. ಆದರೆ, ಈ ಕಾಯ್ದೆಯಿಂದ ರಾಜ್ಯಕ್ಕೆ, ರೈತರಿಗೆ, ಕಾರ್ಮಿಕರಿಗೆ, ಕೈಗಾರಿಕೆಗಳಿಗೆ ಎಷ್ಟು ಲಾಭವಾಯಿತು ಎಂದು ಯಾರಾದರೂ ಪರಿಶೀಲನೆ ಮಾಡಿದ್ದಾರಾ? ಸಿಎಂ ಹಾಗೂ ಪಶು ಸಂಗೋಪನಾ ಸಚಿವರು ಇದನ್ನು ಕ್ರಾಂತಿಕಾರಿ ಕಾಯ್ದೆ, ಗುಜರಾತ್ ಮಾಡೆಲ್ ಎಂದಿದ್ದರು. ಆದರೆ ಈ ಕಾನೂನು ಯಾವ ದುಸ್ಥಿತಿಯಲ್ಲಿ ಇದೆ ಎಂಬ ಕನಿಷ್ಠ ಪ್ರಜ್ಞೆ ಇವರಿಗೆ ಇದೆಯೇ? ಈ ಕಾನೂನು ರೈತರು, ಚರ್ಮ ಉದ್ಯಮ ಕಾರ್ಮಿಕರು, ರಾಜ್ಯದ ಆರ್ಥಿಕ ಪರಿಸ್ಥಿತಿಗೆ ದೊಡ್ಡ ಪೆಟ್ಟು ಬಿದ್ದಿದೆ'' ಎಂದು ಆತಂಕ ವ್ಯಕ್ತಪಡಿಸಿದರು. 

''ಗೋಮಾತೆ ಹೆಸರಲ್ಲೂ ಮೋಸ ಮಾಡುತ್ತಿದ್ದಾರೆ. ಗೋಶಾಲೆ ಮೇವು ಪೂರೈಕೆಗೆ ಹಣ ಬಿಡುಗಡೆಗಾಗಿ 8.5% ಕಮಿಷನ್ ನೀಡಬೇಕು ಎಂದು ಹರ್ಷ ಅಸೋಸಿಯೇಟ್ಸ್ 14-04-2 022ರಲ್ಲಿ ಪ್ರಧಾನಿಗೆ ಪತ್ರ ಬರೆದಿತ್ತು. ಇಂದು ನಾವು ನೀಡುತ್ತಿರುವ ಅಂಕಿ ಅಂಶ ನಮ್ಮದಲ್ಲ, ಸರ್ಕಾರದ ಇಲಾಖೆಯ ಅಂಕಿ ಅಂಶಗಳನ್ನು ನೀಡುತ್ತಿದ್ದೇವೆ. ಮಂತ್ರಿಗಳು ಕ್ಯಾಬಿನೆಟ್ ಸಭೆಯ ಅಂಶಗಳನ್ನು ಸರಿಯಾಗಿ ಓದುವುದಿಲ್ಲ ಎಂದು ಕಾಣಿಸುತ್ತದೆ. ಹಣಕಾಸು ಇಲಾಖೆಯು ರಾಜ್ಯದ ಮೇಲೆ ಈ ಒತ್ತಡವನ್ನು ಹೇರಬೇಡಿ ಎಂದು ಹೇಳಿದೆ. ಇದರಿಂದ ರಾಜ್ಯ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ಸ್ಪಷ್ಟವಾಗಿ ಹೇಳಿದೆ. ಬಿಜೆಪಿ ನಾಯಕರು ರಾಜ್ಯದ ಆರ್ಥಿಕ ಪರಿಸ್ಥಿತಿ, ಕಾರ್ಮಿಕರು, ರೈತರು ಹಾಗೂ ಕೈಗಾರಿಕೆಗಳ ಬಗ್ಗೆ ಕಾಳಜಿ ತೋರಿಸುತ್ತಿಲ್ಲ. ಅವರಿಗೆ ಈ ಕಾಯ್ದೆ ಜಾರಿಗೆ ತರಬೇಕು, ಕೇಶವ ಕೃಪದಿಂದ ಬೆನ್ನು ತಟ್ಟಿಸಿಕೊಳ್ಳುವುದಷ್ಟೇ ಮುಖ್ಯವಾಗಿದೆ'' ಎಂದು ಟೀಕಿಸಿದರು.

''ಸರ್ಕಾರದಲ್ಲಿ ಇರೋರಿಗೆ ಈ ಕಾಯ್ದೆಯ ಉದ್ದೇಶ ಏನಿದೆ ಎಂದು ಗೊತ್ತಿಲ್ಲ. ಈ ಕಾಯ್ದೆ ಬಂದ ನಂತರ ರೈತರಿಗೆ ಮಾರಕವಾಗಿದೆ. ಇಡೀ ವಿಶ್ವದಲ್ಲಿ ಶೇಕಡ 13ರಷ್ಟು ಚರ್ಮ ಉತ್ಪನ್ನಗಳು ಭಾರತದಿಂದ ಉತ್ಪಾದನೆ ಆಗುತ್ತಿದ್ದವು. ಕೋವಿಡ್ ಗೂ ಮುನ್ನ ದೇಶದ ಚರ್ಮ ವ್ಯಾಪಾರ ಉದ್ಯಮ 5.5 ಬಿಲಿಯನ್ ಡಾಲರ್ ಗಳಷ್ಟಿತ್ತು. ಚರ್ಮ ಹಾಗೂ ಪಾದರಕ್ಷೆ ಉತ್ಪಾದನೆ ಕ್ಷೇತ್ರದಲ್ಲಿ ಭಾರತ ಎರಡನೇ ಸ್ಥಾನದಲ್ಲಿತ್ತು. ಶೇಕಡಾ 9 ರಷ್ಟು ಪಾದರಕ್ಷೆಗಳು ಭಾರತದಲ್ಲಿ ತಯಾರಾಗುತ್ತಿದ್ದವು'' ಎಂದು ತಿಳಿಸಿದರು.

''ರಾಜ್ಯದಲ್ಲಿ 2020-21ನೇ ಸಾಲಿನಲ್ಲಿ ರಾಜ್ಯ ಹಣಕಾಸು ಸಮೀಕ್ಷೆ ಪ್ರಕಾರ, ರಾಜ್ಯದ ಚರ್ಮ ಉತ್ಪನ್ನ ರಫ್ತು 2017-18 ರಲ್ಲಿ 521.81 ಕೋಟಿಯಷ್ಟು ಇತ್ತು. 2018-19 562 ಕೋಟಿ, 2019-20ಯಲ್ಲಿ 502 ಕೋಟಿ, 2020-21 ಸಾಲಿನಲ್ಲಿ 160.84 ಕ್ಕೆ ಕುಸಿದಿದೆ. ಇದ್ಯಾವುದೂ ಕಾಂಗ್ರೆಸ್ ಮಾಹಿತಿ ಅಲ್ಲ'' ಎಂದು ಸ್ಪಷ್ಟಪಡಿಸಿದರು.

''ರಾಜ್ಯ ಸರ್ಕಾರದ ಪ್ರಕಾರ, ಚರ್ಮ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಲ್ಲಿ ಹೆಚ್ಚಿನ ಜನ ಪರಿಶಿಷ್ಟ ಜಾತಿ ಹಾಗೂ ಪಂಗಡದವರಾಗಿದ್ದಾರೆ. ಈ ಉದ್ಯಮದಲ್ಲಿ 3.5 ಲಕ್ಷ ನೊಂದಾಯಿತ ಕಾರ್ಮಿಕರಿದ್ದಾರೆ. 91 ಕೈಗಾರಿಕೆಗಳು ರಾಜ್ಯದಲ್ಲಿದ್ದು ಇವುಗಳಲ್ಲಿ ಬಹುತೇಕ ಬಂದಾಗುವ ಹಂತಕ್ಕೆ ಬಂದಿವೆ. ಎಲ್ಲಾ ಕಾರ್ಮಿಕರು ಬೀದಿಗೆ ಬಂದಿದ್ದು ಈ ಬಗ್ಗೆ ಸರ್ಕಾರ ಯಾವುದಾದರೂ ಕ್ರಮ ಕೈಗೊಂಡಿದೆಯೇ? ಒಂದಾದರೂ ಯೋಜನೆ ರೂಪಿಸಿದೆಯೇ? ಇವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದೆಯೇ? ಆದರೂ ಈ ಕಾಯ್ದೆ ಜಾರಿಯನ್ನು ಯಾವ ಉದ್ದೇಶಕ್ಕಾಗಿ ಮಾಡಿದ್ದಾರೆ? '' ಎಂದು ಪ್ರಶ್ನೆ ಮಾಡಿದರು. 

Similar News