ಜಿಲ್ಲಾ ರಜತ ಮಹೋತ್ಸವದಂಗವಾಗಿ ಉಡುಪಿಯಲ್ಲಿ 3-4ರಂದು ವಿಚಾರಸಂಕಿರಣ

Update: 2022-11-30 14:15 GMT

ಉಡುಪಿ: ಉಡುಪಿ ಜಿಲ್ಲಾ ರಜತ ಮಹೋತ್ಸವದ ಅಂಗವಾಗಿ ಶೈಕ್ಷಣಿಕ, ಸಾಂಸ್ಕೃತಿಕ, ಆರ್ಥಿಕ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ತೋರ್ಪಡಿಸಿರುವ ಜಿಲ್ಲೆಯ ಸಾಧನೆಯನ್ನು ನೆನಪಿಸಿಕೊಂಡು ಮುಂದಿನ 25 ವರ್ಷಗಳಲ್ಲಿ ಸಾಧಿಸಬೇಕಾಗಿರುವ ಹೊಸ ಯೋಜನೆಗಳ ರೂಪುರೇಷೆಯನ್ನು ಹಾಕಿಕೊಂಡು ಅದನ್ನು ಕಾರ್ಯಗತಗೊಳಿಸಲು ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಅಭಿಪ್ರಾಯ  ಪಡೆಯಲು ಇದೇ ಡಿ.3 ಮತ್ತು 4 ರಂದು ‘ಉಡುಪಿ ಜಿಲ್ಲೆಯಲ್ಲಿ ದಿಕ್ಸೂಚಿ... ಸುವರ್ಣ ಉಡುಪಿಗೆ ರಜತ ಉಡುಪಿಯ ಪರಿಕಲ್ಪನೆ’ ಎಂಬ ಎರಡು ದಿನಗಳ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ.

ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸಿದ ಜಿಲ್ಲಾಧಿಕಾರಿಗಳು, ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಶಿಕ್ಷಣ ತಜ್ಞರು, ಕೈಗಾರಿಕೋದ್ಯಮಿಗಳು, ವೈದ್ಯಕೀಯ ರಂಗದಲ್ಲಿ ಸೇವೆ ಸಲ್ಲಿಸಿದವರು, ಕೃಷಿ, ಮತ್ಸ್ಯೋದ್ಯಮ ಮತ್ತು ಪ್ರವಾಸೋದ್ಯಮಿಗಳ ವಿಚಾರ ಸಂಕಿರಣವನ್ನು ಹಮ್ಮಿ ಕೊಳ್ಳಲಾಗಿದೆ.

ವಿಚಾರ ಸಂಕಿರಣವು ಆರೋಗ್ಯ ಮತ್ತು ಶಿಕ್ಷಣ, ಪ್ರವಾಸೋದ್ಯಮ, ಸ್ವಾಸ್ಥ್ಯ ಮತ್ತು ಪರಿಸರ, ಉದ್ಯಮ, ಬಂಡವಾಳ ಮತ್ತು ಮೂಲಸೌಕರ್ಯ, ಬ್ಯಾಂಕಿಂಗ್ ಮತ್ತು ಸ್ಟಾರ್ಟ್‌ಅಪ್ ಅಲ್ಲದೇ ಕೃಷಿ ಹಾಗೂ ಕೃಷಿ ಸಂಬಂಧಿತ ವಿಷಯಗಳನ್ನು ಒಳಗೊಂಡಿರುತ್ತದೆ.

ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಆಸಕ್ತಿಯನ್ನು ಹೊಂದಿರುವವರು ವೆಬ್‌ಸೈಟ್- https://forms.gle/Tv2pzeSELsBddYCy5-ಅಥವಾ ಕ್ಯೂಆರ್‌ಕೋಡ್ ಮೂಲಕ ನೋಂದಣಿ ಮಾಡಿ ಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Similar News