ಏಮ್ಸ್ ಮೇಲೆ ಸೈಬರ್ ದಾಳಿ : 6 ದಿನಗಳ ಬಳಿಕ ಸರ್ವರ್ ಗಳಿಗೆ ಮರಳಿದ ದತ್ತಾಂಶ

Update: 2022-11-30 14:57 GMT

ಹೊಸದಿಲ್ಲಿ, ನ. 30: ಸೈಬರ್ ದಾಳಿಯ ಆರು ದಿನಗಳ ಬಳಿಕ, ‘ಇ-ಹಾಸ್ಪಿಟಲ್’('E-Hospital') ದತ್ತಾಂಶಗಳನ್ನು ಸರ್ವರ್ ಗಳಲ್ಲಿ ಮರಳಿ ಪಡೆಯಲಾಗಿದೆ ಎಂದು ದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಮಂಗಳವಾರ ತಿಳಿಸಿದೆ.

ಬೃಹತ್ ಪ್ರಮಾಣದ ದತ್ತಾಂಶಗಳು ಮತ್ತು ಹಲವು ಸರ್ವರ್ಗಳ ಮೇಲೆ ದಾಳಿ ನಡೆದಿರುವುದರಿಂದ ಆನ್ ಲೈನ್ ಸೇವೆಗಳ ಪುನರಾರಂಭಕ್ಕೆ ಸ್ವಲ್ಪ ಸಮಯ ತಗಲುತ್ತದೆ ಎಂದು ದೇಶದ ಮುಂಚೂಣಿಯ ಸರಕಾರಿ ಒಡೆತನದ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

‘‘ಹೊರ ರೋಗಿ ವಿಭಾಗ, ಒಳರೋಗಿ ವಿಭಾಗ, ಪ್ರಯೋಗಾಲಯಗಳು ಸೇರಿದಂತೆ ಆಸ್ಪತ್ರೆಯ ಎಲ್ಲಾ ಸೇವೆಗಳನ್ನು ಮಾನವ ಸಿಬ್ಬಂದಿಯೇ ನೀಡುತ್ತಿದ್ದು, ಅದು ಇನ್ನೂ ಸ್ವಲ್ಪ ಸಮಯ ಮುಂದುವರಿಯಲಿದೆ’’ ಎಂದು ಅದು ಹೇಳಿದೆ.

ನವೆಂಬರ್ 23ರಂದು ಸೈಬರ್ ದಾಳಿ ನಡೆದ ಬಳಿಕ, ಆಸ್ಪತ್ರೆಯಲ್ಲಿನ ರೋಗಿಗಳಿಗೆ ಸಂಬಂಧಿಸಿದ ಹಲವಾರು ಸೇವೆಗಳು ವ್ಯತ್ಯಯಗೊಂಡಿದ್ದವು.

ಅದು  ರ‍್ಯಾನ್ಸಮ್‌ವೇರ್‌ (ಹಣಕ್ಕೆ ಬೇಡಿಕೆಯಿರಿಸಿ ನಡೆಸುವ) ದಾಳಿಯಾಗಿದೆ ಎಂದು ಹೇಳಲಾಗಿದೆ. ಆದರೆ, ಈವರೆಗೆ ಹಣಕ್ಕೆ ಬೇಡಿಕೆ ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ನವೆಂಬರ್ 25ರಂದು ಸುಲಿಗೆ ಮತ್ತು ಸೈಬರ್ ಭಯೋತ್ಪಾದನೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Similar News