ಫೆಲೆಸ್ತೀನೀಯರಿಗೆ ನಮ್ಮ ಬೆಂಬಲ ಅಚಲ: ಪ್ರಧಾನಿ ಮೋದಿ ಹೇಳಿಕೆ

Update: 2022-11-30 16:59 GMT

ಹೊಸದಿಲ್ಲಿ, ನ. 30: ಫೆಲೆಸ್ತೀನ್ ಜನರಿಗೆ ಭಾರತದ ‘‘ಅಚಲ ಬೆಂಬಲ’’("Unwavering Support")ವನ್ನು ಪ್ರಧಾನಿ ನರೇಂದ್ರ ಮೋದಿ(Narendra Modi) ಮಂಗಳವಾರ ಪುನರುಚ್ಚರಿಸಿದ್ದಾರೆ.

‘‘ಫೆಲೆಸ್ತೀನ್ ಜನರು ಘನತೆ ಮತ್ತು ಸ್ವಾವಲಂಬನೆಯೊಂದಿಗೆ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಯನ್ನು ಸಾಧಿಸುವುದನ್ನು ನಾವು ಬೆಂಬಲಿಸುತ್ತಾ ಬಂದಿದ್ದೇವೆ’’ ಎಂದು ಮೋದಿ ಹೇಳಿದರು. ‘‘ಫೆಲೆಸ್ತೀನ್ ಮತ್ತು ಇಸ್ರೇಲ್ ನಡುವಿನ ವಿವಾದಕ್ಕೆ ಸಮಗ್ರ ಪರಿಹಾರವೊಂದನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ಉಭಯ ತಂಡಗಳ ನಡುವಿನ ನೇರ ಮಾತುಕತೆ ಪುನರಾರಂಭಗೊಳ್ಳುತ್ತದೆ ಎಂಬ ನಿರೀಕ್ಷೆಯನ್ನು ನಾವು ಹೊಂದಿದ್ದೇವೆ’’ ಎಂದು ಅವರು ಹೇಳಿದರು.

ನವೆಂಬರ್ 29ನ್ನು ‘ಅಂತರ್ರಾಷ್ಟ್ರೀಯ ಫೆಲೆಸ್ತೀನ್ ಜನರಿಗೆ ಬೆಂಬಲ ನೀಡುವ ದಿನ’ವಾಗಿ ವಿಶ್ವಸಂಸ್ಥೆ ಆಚರಿಸುತ್ತಿದೆ. ಈ ದಿನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಹೇಳಿಕೆ ನೀಡಿದ್ದಾರೆ.

ಫೆಲೆಸ್ತೀನ್ ಜನರು ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ನಿರ್ಣಯವಾಗಿರುವಂತೆ ತಮ್ಮ ಸಮಗ್ರ ಹಕ್ಕುಗಳನ್ನು ಇನ್ನಷ್ಟೇ ಪಡೆಯಬೇಕಾಗಿದೆ ಹಾಗೂ ಇಸ್ರೇಲ್-ಫೆಲೆಸ್ತೀನ್ (Israel-Palestine)ವಿವಾದ ಬಗೆಹರಿದಿಲ್ಲ ಎನ್ನುವುದು ಈ ದಿನಾಚರಣೆಯ ಪ್ರಮುಖ ಉದ್ದೇಶವಾಗಿದೆ.

ಫೆಲೆಸ್ತೀನ್ ನ ಅಭಿವೃದ್ಧಿ ಚಟುವಟಿಕೆಗಳಿಗೆ ಭಾರತವು ಹಿಂದಿನಿಂದಲೂ ನೆರವು ನೀಡುತ್ತಾ ಬಂದಿದೆ ಎಂದು ತನ್ನ ಸಂದೇಶದಲ್ಲಿ ಮೋದಿ ಹೇಳಿದರು. ಭಾರತ-ಫೆಲೆಸ್ತೀನ್ ಟೆಕ್ನೊ ಪಾರ್ಕ್, ಫೆಲೆಸ್ತೀನ್ ರಾಷ್ಟ್ರೀಯ ಪ್ರಿಂಟಿಂಗ್ ಪ್ರೆಸ್ ಮತ್ತು ಈಗಾಗಲೇ ಕಾರ್ಯಾಚರಿಸುತ್ತಿರುವ ನಾಲ್ಕು ಶಾಲೆಗಳ ನಿರ್ಮಾಣಕ್ಕೆ ಭಾರತ ನೆರವು ನೀಡಿದೆ ಎಂದರು.

Similar News