ಗಡಿ ವಿವಾದದ ಬೆನ್ನಲ್ಲೇ ಡಿ.2ರಂದು ಬೆಳಗಾವಿಗೆ ಭೇಟಿ ನೀಡಲಿರುವ ಸಿಎಂ ಬೊಮ್ಮಾಯಿ

Update: 2022-11-30 17:17 GMT

ಬೆಂಗಳೂರು, ನ.30: ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆ ಆರಂಭವಾಗುತ್ತಿರುವ ಬೆನ್ನಲ್ಲೇ ಡಿ.2(ಶುಕ್ರವಾರ)ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿಗೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ರಾಮದುರ್ಗ ತಾಲೂಕಿನ ದೊಡಮಂಗಡಿ ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ವೃತ್ತದಲ್ಲಿ ಶ್ರೀ ಬಸವೇಶ್ವರರ ಕಂಚಿನ ಪುತ್ಥಳಿ ಅನಾವರಣಗೊಳಿಸಲಿರುವ ಮುಖ್ಯಮಂತ್ರಿ, ಆನಂತರ ಸಾಲಹಳ್ಳಿ ಗ್ರಾಮದಲ್ಲಿ ರಾಮದುರ್ಗ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಲಿದ್ದಾರೆ.

ಡಿಸೆಂಬರ್ 19 ರಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲದ ಅಧಿವೇಶನ ಆರಂಭವಾಗುತ್ತಿದೆ. ಅದಕ್ಕೂ ಮೊದಲು ಬೆಳಗಾವಿಗೆ ಮಹಾರಾಷ್ಟ್ರದ ಇಬ್ಬರು ಸಚಿವರನ್ನು ಕರೆಸಿ ವಿವಿಧ ಕಾರ್ಯಕ್ರಮಗಳು, ಸಭೆಗಳನ್ನು ನಡೆಸಲು ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ಯವರು ಉದ್ದೇಶಿಸಿದ್ದು, ಈ ಸಂಬಂಧ ಸಚಿವರಿಗೆ ಆಹ್ವಾನವನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಮಹಾರಾಷ್ಟ್ರದ ಸಚಿವರನ್ನು ಇಲ್ಲಿಗೆ ಕರೆಸಿ ಶಾಂತಿ ಭಂಗ ಉಂಟು ಮಾಡಲು ಹುನ್ನಾರ ನಡೆಸುತ್ತಿರುವ ಎಂಇಎಸ್ ಮುಖಂಡರನ್ನು ಕೂಡಲೆ ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ. 

Similar News