ಭಾರತವು 2020ರಲ್ಲಿ ಅತ್ಯುನ್ನತ ಮಟ್ಟದಲ್ಲಿ ಕೋವಿಡ್ ಸಂಬಂಧಿತ ಧಾರ್ಮಿಕ ಹಗೆತನಗಳಿಗೆ ಸಾಕ್ಷಿಯಾಗಿತ್ತು: ವರದಿ

Update: 2022-12-01 14:38 GMT

ಭಾರತವು 2020ರಲ್ಲಿ ಅತ್ಯುನ್ನತ ಮಟ್ಟದಲ್ಲಿ ಕೋವಿಡ್ ಸಂಬಂಧಿತ ಧಾರ್ಮಿಕ ಹಗೆತನಗಳಿಗೆ ಸಾಕ್ಷಿಯಾಗಿತ್ತು: ವರದಿ

ಹೊಸದಿಲ್ಲಿ, ಡಿ.1: 2020ರಲ್ಲಿ ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಅತ್ಯುನ್ನತ ಮಟ್ಟದ ಧಾರ್ಮಿಕ ಹಗೆತನಗಳಿಗೆ ಭಾರತವು ಸಾಕ್ಷಿಯಾಗಿತ್ತು ಎಂದು ಪ್ಯೂ ರೀಸರ್ಚ್ ಸೆಂಟರ್ Pew Research Center (PRC) ತನ್ನ ವರದಿಯಲ್ಲಿ ಹೇಳಿದೆ ಎಂದು scroll.in ವರದಿ ಮಾಡಿದೆ.

ಧರ್ಮಗಳ ಆಚರಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ನಿರ್ಬಂಧಗಳ ಕುರಿತು PRCಯ 13ನೇ ವಾರ್ಷಿಕ ಅಧ್ಯಯನದಂತೆ 10ರಲ್ಲಿ 9.4 ಅಂಕಗಳೊಂದಿಗೆ ಭಾರತವು ಸಾಮಾಜಿಕ ಹಗೆತನ ಸೂಚ್ಯಂಕ (ಎಸ್ಎಚ್ಐ)ದಲ್ಲಿ ತನ್ನ ನೆರೆದೇಶಗಳಾದ ಪಾಕಿಸ್ತಾನ (7.5) ಮತ್ತು ಅಫಘಾನಿಸ್ತಾನ (8)ಗಳಿಗಿಂತ ಹೀನಾಯ ಸ್ಥಾನದಲ್ಲಿದೆ.

2020ರ ಆರಂಭದಲ್ಲಿ ತಬ್ಲಿಗಿ ಜಮಾಅತ್ ದಿಲ್ಲಿಯ ನಿಝಾಮುದ್ದೀನ್ ಮರ್ಕಝ್ ನಲ್ಲಿ ಆಯೋಜಿಸಿದ್ದ ಧಾರ್ಮಿಕ ಸಮ್ಮೇಳನದ ಬಳಿಕ ಅದರ 900 ಸದಸ್ಯರನ್ನು ಕ್ವಾರಂಟೈನ್ನಲ್ಲಿ ಇರಿಸುವ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ನಿರ್ಧಾರವನ್ನು ವರದಿಯು ಉಲ್ಲೇಖಿಸಿದೆ.

ದೇಶದಲ್ಲಿ ಕೋವಿಡ್ ಹರಡುವಿಕೆಗೆ ತಬ್ಲಿಗಿ ಜಮಾಅತ್ ನ ಸಮ್ಮೇಳನವು ಕಾರಣವಾಗಿತ್ತು ಎಂಬ ಆರೋಪದ ಬಳಿಕ 2020, ಮಾ.31ರಿಂದ ಮಸೀದಿಯನ್ನು ಮುಚ್ಚಲಾಗಿತ್ತು. ಈ ಘಟನೆಯು ಮುಸ್ಲಿಮರ ವಿರುದ್ಧದ ದ್ವೇಷಭಾವನೆಯನ್ನು ಕೆರಳಿಸಿತ್ತು ಹಾಗೂ ವ್ಯವಹಾರ ಬಹಿಷ್ಕಾರಗಳು ಮತ್ತು ದ್ವೇಷ ಭಾಷಣಗಳ ಅಲೆಗಳಿಗೆ ಕಾರಣವಾಗಿತ್ತು.

ಸರಕಾರದ ಕೋವಿಡ್ ಮಾರ್ಗಸೂಚಿಗಳ ಅಥವಾ ತಮ್ಮ ವೀಸಾ ಷರತ್ತುಗಳನ್ನು ಉಲ್ಲಂಘನೆಯಂತಹ ಕಾರಣಗಳನ್ನೊಡ್ಡಿ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದವರ ವಿರುದ್ಧ ಹಲವಾರು ಪ್ರಕರಣಗಳನ್ನೂ ದಾಖಲಿಸಲಾಗಿತ್ತು. ಆದರೆ ನ್ಯಾಯಾಲಯಗಳು ಹೆಚ್ಚಿನ ಎಫ್ಐಆರ್ ಗಳನ್ನು ರದ್ದುಗೊಳಿಸಿವೆ ಮತ್ತು ತಬ್ಲಿಗಿ ಸದಸ್ಯರನ್ನು ಖುಲಾಸೆಗೊಳಿಸಿವೆ.

ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ 2020ರಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಹತ್ಯೆಗಳು ನಡೆದಿದ್ದ ಮೂರು ದೇಶಗಳಲ್ಲಿ ಭಾರತವೂ ಒಂದಾಗಿತ್ತು ಎಂದೂ ವರದಿಯು ಹೇಳಿದೆ. ಇಂಡೋನೇಶ್ಯಾ ಮತ್ತು ಯೆಮೆನ್ ಇತರ ಎರಡು ದೇಶಗಳಾಗಿವೆ. ತಮಿಳುನಾಡಿನಲ್ಲಿ ಕೋವಿಡ್ ನಿರ್ಬಂಧಗಳನ್ನು ಉಲ್ಲಂಘಿಸಿದ್ದ ಆರೋಪದಲ್ಲಿ ಬಂಧಿಸಲ್ಪಟ್ಟು, ಪೊಲೀಸ್ ಠಾಣೆಯಲ್ಲಿ ಥಳಿತದ ಬಳಿಕ ಸಾವನ್ನಪ್ಪಿದ್ದ ಇಬ್ಬರು ಕ್ರೈಸ್ತರನ್ನು ವರದಿಯು ಉಲ್ಲೇಖಿಸಿದೆ.

ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ತಮ್ಮ ಮೊಬೈಲ್ ಫೋನ್ ಬಿಡಿಭಾಗಗಳ ಅಂಗಡಿಯನ್ನು ಅನುಮತಿಸಲ್ಪಟ್ಟ ಅವಧಿಯ ಬಳಿಕವೂ ತೆರೆದಿದ್ದಕ್ಕಾಗಿ 2020, ಜೂ.19ರಂದು ಜಯರಾಜ್ ಮತ್ತು ಪುತ್ರ ಬೆನಿಕ್ಸ್ ಅವರನ್ನು ಪೊಲೀಸರು ವಿಚಾರಣೆಗಾಗಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಬಳಿಕ ಅವರನ್ನು ಕೋವಿಲಪಟ್ಟಿ ಸಬ್ ಜೈಲಿಗೆ ಕಳುಹಿಸಲಾಗಿತ್ತು. ಜೂ.22ರಂದು ಉಸಿರಾಟದ ತೊಂದರೆಯನ್ನು ಎದುರಿಸುತ್ತಿದ್ದ ಬೆನಿಕ್ಸ್ರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದರೆ,ಮರುದಿನ ಅವರ ತಂದೆ ಜಯರಾಜ್ ಕೂಡ ಮೃತಪಟ್ಟಿದ್ದರು.

ಜಯರಾಜ್ ಮತ್ತು ಬೆನಿಕ್ಸ್ ರನ್ನು ಎಷ್ಟೊಂದು ಕ್ರೂರವಾಗಿ ಥಳಿಸಲಾಗಿತ್ತು ಎನ್ನುವುದಕ್ಕೆ ಗೋಡೆಯ ಮೇಲಿನ ರಕ್ತದ ಕಲೆಗಳೇ ಸಾಕ್ಷಿಯಾಗಿವೆ. ಅವರು ತಮ್ಮ ಬಟ್ಟೆಗಳಿಂದಲೇ ರಕ್ತವನ್ನು ಒರೆಸುವಂತೆ ಮಾಡಲಾಗಿತ್ತು. ಇಬ್ಬರನ್ನೂ ಹಲವಾರು ಸುತ್ತುಗಳ ಬರ್ಬರ ಹಿಂಸೆಗೆ ಗುರಿಪಡಿಸಲಾಗಿತ್ತು ಎಂದು ಸಿಬಿಐ ತನ್ನ ದೋಷಾರೋಪ ಪಟ್ಟಿಯಲ್ಲಿ ಹೇಳಿತ್ತು.

ಆದಾಗ್ಯೂ ಭಾರತವು ಸರಕಾರಿ ನಿರ್ಬಂಧಗಳ ಸೂಚ್ಯಂಕದಲ್ಲಿ 5.8 ಅಂಕಗಳೊಂದಿಗೆ ಕೊಂಚ ಉತ್ತಮ ಸ್ಥಾನದಲ್ಲಿದೆ. ಚೀನಾ ಅತ್ಯಂತ ಹೆಚ್ಚಿನ ಸರಕಾರಿ ನಿರ್ಬಂಧಗಳೊಂದಿಗೆ 9.3 ಅಂಕಗಳನ್ನು ಹೊಂದಿದೆ.

Similar News