ಹಲವು ರೂಪಗಳಲ್ಲಿ ಅಸ್ತಿತ್ವದಲ್ಲಿರುವ ಗುಲಾಮಗಿರಿ

ಇಂದು ಅಂತರ್‌ರಾಷ್ಟ್ರೀಯ ಗುಲಾಮಗಿರಿ ನಿರ್ಮೂಲನ ದಿನ

Update: 2022-12-02 05:53 GMT

ಸಮಾಜದಲ್ಲಿನ ದುರ್ಬಲರ ಪಾಲಿನ ಕರಾಳ ಕೋಟೆಯಂತೆ ಗುಲಾಮಗಿರಿ ಈ ಜಗತ್ತಿನಲ್ಲಿ ಇದ್ದೇ ಇದೆ.

ಬೆದರಿಕೆ, ಹಿಂಸಾಚಾರ, ದಬ್ಬಾಳಿಕೆ, ಅಧಿಕಾರ ದುರುಪಯೋಗ ಹೀಗೆ ನಾನಾ ರೂಪಗಳಲ್ಲಿ ಇದು ಕಾಡುತ್ತದೆ. ಗುಲಾಮಗಿರಿಯ ಆಚರಣೆ ಯಾವ ರೂಪದಲ್ಲಿದ್ದರೂ ಅಪರಾಧವೇ. ಅಮಾನವೀಯವಾದ ಇದನ್ನೆಲ್ಲ ತಡೆಗಟ್ಟಲು ಗುಲಾಮಗಿರಿ ನಿರ್ಮೂಲನಾ ದಿನವನ್ನು ಗೊತ್ತುಮಾಡಲಾಗಿದೆ.
ಚರಿತ್ರೆಯ ಪುಟಗಳಲ್ಲಿ ಗುಲಾಮಗಿರಿಯನ್ನು ನೋಡುವುದಾದರೆ, ಅಟ್ಲಾಂಟಿಕ್‌ನ ಗುಲಾಮಗಿರಿ ಮತ್ತು ಬಲವಂತದ ವಲಸೆಯು ಇತಿಹಾಸದಲ್ಲಿ ಒಂದು ಅತ್ಯಂತ ದೊಡ್ಡ ಅಮಾನವೀಯ ಸಂದರ್ಭವಾಗಿದೆ. ಆಫ್ರಿಕನ್ನರ ವ್ಯಾಪಕ ವಲಸೆ ವಿಶ್ವದ ಅನೇಕ ಪ್ರದೇಶಗಳಲ್ಲಿ ಹರಡಿತು ಮತ್ತು ಇದು 400 ವರ್ಷದ ಅವಧಿಯಲ್ಲಿ ಮಾನವ ಇತಿಹಾಸದ ದಾಖಲೆಯಾಗಿತ್ತು. ಇದರ ಪರಿಣಾಮ ಶೇ.96ರಷ್ಟು ಬಂಧಿತ ಆಫ್ರಿಕನ್ನರನ್ನು ದ್ವೀಪಗಳ ಮೂಲಕ ಇಕ್ಕಟ್ಟಾದ ಗುಲಾಮಿ ಹಡಗುಗಳಲ್ಲಿ ದಕ್ಷಿಣ ಅಮೆರಿಕ ಹಾಗೂ ಕೆರಿಬಿಯನ್ ಬಂದರುಗಳಿಗೆ ಸಾಗಿಸಲಾಗುತ್ತಿತ್ತು.
ಆಫ್ರಿಕಾದ 15 ಮಿಲಯನ್ ಜನಸಂಖ್ಯೆಯಲ್ಲಿ 3ರಲ್ಲಿ ಒಂದು ಭಾಗದಷ್ಟು ಮಹಿಳೆಯರೇ ಗುಲಾಮರಾಗಿದ್ದರು. ಇವರು ತಮ್ಮ ಕಠಿಣ ಪರಿಸ್ಥಿತಿಯ ಜೊತೆಗೆ ಬಲವಂತದ ಕಾರ್ಮಿಕತನದ ದಬ್ಬಾಳಿಕೆ, ಮೈಬಣ್ಣ ಹಾಗೂ ಲಿಂಗ ಭೇದದ ತಾರತಮ್ಯ ಮತ್ತು ತೀವ್ರ ಶೋಷಣೆಯನ್ನು ಅನುಭವಿಸಿದರು. ಮಹಿಳೆಯರು ವಿವಿಧ ರೀತಿಯಲ್ಲಿ ಗುಲಾಮಗಿರಿಯನ್ನು ವಿರೋಧಿಸಿದರು. ಅವರು ತಮ್ಮ ಸಮುದಾಯಗಳ ಘನತೆ ಮತ್ತು ಏಕತೆ ಕಾಪಾಡಲು ಪ್ರಯತ್ನಿಸಿದರು. ಕೆಲವರು ತಮ್ಮ ಧನಿಗಳ ಉಪಪತ್ನಿಯರಾಗಿ ಹಾಗೂ ಇನ್ನು ಕೆಲವರು ತಮ್ಮ ಹಾಗೂ ಅವರ ಮಕ್ಕಳ ಸ್ವತಂತ್ರ ಬದುಕಿಗಾಗಿ ಇತರರನ್ನು ಮದುವೆಯಾಗುತ್ತಿದ್ದರು.
ಇತರರು ಆಧ್ಯಾತ್ಮಿಕ ನಾಯಕರಾಗಿ ಅಥವಾ ಕ್ರಾಂತಿಗಳು ಮತ್ತು ದಂಗೆಗಳಲ್ಲಿ ಹಾಗೂ ಕಾನೂನು ಯುದ್ಧಗಳಲ್ಲಿ ಭಾಗವಹಿಸಿ ತಮ್ಮನ್ನು ತಾವು ಬಂಧಮುಕ್ತರಾಗಿಸುವಂತೆ ಪ್ರಯತ್ನಿಸಿದರು. ಈ ಹೀನಾಯ ಗುಲಾಮಗಿರಿಯ ವಿರುದ್ಧ ಅವರು ಹೋರಾಡಿದರು. ಇವರ ಹೋರಾಟದ ಕೆಲವು ಘಟನೆಗಳು ತಿಳಿಯದಂತಿದೆ.
ಇನ್ನೊಬ್ಬರಿಗೆ ತೊಂದರೆ ಕೊಡದಂತೆ ತನ್ನ ಸ್ವಾತಂತ್ರ್ಯವನ್ನು ಅನುಭವಿಸುವ ಹಕ್ಕು ಎಲ್ಲರಿಗೂ ಇದೆ. ಎಲ್ಲರಿಗೂ ಅವರದೇ ಕನಸುಗಳಿವೆ. ಯಾರೂ ಯಾರ ಗುಲಾಮರಲ್ಲ. ಗುಲಾಮರಾಗಲು ಬಯಸುವುದೂ ಇಲ್ಲ. ಕಾನೂನು ಕೂಡ ಅದನ್ನೇ ಹೇಳುತ್ತದೆ.
ಕಾನೂನಿನ ವಿರೋಧದ ನಡುವೆಯೂ ಗುಲಾಮಗಿರಿ ಹಲವು ರಾಷ್ಟ್ರಗಳಲ್ಲಿ ಇವತ್ತಿಗೂ ಚಾಲ್ತಿಯಲ್ಲಿದೆ. ಆಫ್ರಿಕಾ, ಏಶ್ಯ, ಮಧ್ಯಪೂರ್ವ ರಾಷ್ಟ್ರಗಳಲ್ಲಿ ಇನ್ನೂ ಜೀತದಾಳು ಪದ್ಧತಿ ಕಾಣಿಸುವುದುಂಟು. ಮಕ್ಕಳ ಕಳ್ಳ ಸಾಗಣೆ, ಯುವ ಜನರ ದುರ್ಬಳಕೆ ಇತ್ಯಾದಿಗಳ ಮೂಲಕ ಗುಲಾಮಗಿರಿ ನಡೆಯುತ್ತಿದೆ. ಎಲ್ಲಾ ವಿಧದ ಗುಲಾಮಗಿರಿಯಿಂದ ಮುಕ್ತರಾಗುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವೂ ದೊಡ್ಡ ಮಟ್ಟದಲ್ಲಿಯೇ ಆಗುತ್ತಿದೆ.
ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಮಾಹಿತಿಯಂತೆ ವಿಶ್ವದಲ್ಲಿ ಸುಮಾರು 4 ಕೋಟಿ ಜನರು ಗುಲಾಮಗಿರಿಗೆ ಸಿಲುಕಿದ್ದಾರೆ. ಬಲವಂತವಾಗಿ ಮಾಡುವ ಕೆಲಸ, ಬಲವಂತದಿಂದ ನಡೆಯುವ ಮದುವೆ, ಮಾನವ ಸಾಗಣೆ, ಸಾಲದ ತೊಂದರೆ ಇತ್ಯಾದಿಗಳನ್ನು ಆಧುನಿಕ ಗುಲಾಮಗಿರಿ ಎಂದೇ ಪರಿಗಣಿಸಲಾಗುತ್ತದೆ.
ಒಂದು ಮಾಹಿತಿಯ ಪ್ರಕಾರ, ಆಧುನಿಕ ಸ್ವರೂಪದ ಗುಲಾಮಗಿರಿಗೆ ತುತ್ತಾಗಿರುವವರಲ್ಲಿ ಬಲವಂತದ ದುಡಿಮೆಯಿಂದ ನರಳುತ್ತಿರುವವರು 2 ಕೋಟಿ 49 ಲಕ್ಷ. ಒತ್ತಾಯದ ಮದುವೆಯಿಂದ ಹಿಂಸೆ ಅನುಭವಿಸುತ್ತಿರುವವರು 1 ಕೋಟಿ 54 ಲಕ್ಷ. ಪ್ರತೀ ಸಾವಿರಕ್ಕೆ ಐವರು ಆಧುನಿಕ ಗುಲಾಮಗಿರಿಯ ಬಂದಿಗಳಾಗಿದ್ದಾರೆ.
ಮೇಲ್ನೋಟಕ್ಕೆ ಸಾಮಾನ್ಯವೆಂಬಂತಿರುವ ಹಲವು ಸಂಗತಿಗಳು ಆಳದಲ್ಲಿ ಗುಲಾಮಗಿರಿಯೇ ಆಗಿರುತ್ತವೆ. ಕೆಲಸಗಾರರ ಮೇಲಿನ ಮಾಲಕರ ಅತಿಯಾದ ನಿರ್ಬಂಧ ಇಂಥವುಗಳಲ್ಲೊಂದು. ಮುಂಗಡ ಹಣ ಪಡೆದು ಅದಕ್ಕಾಗಿ ದುಡಿಯುವುದು ಕೂಡ ಇದೇ ಬಗೆ. ಬೆದರಿಕೆಗೆ ಒಳಗಾಗಿ, ಹಿಂಸೆ ಅನುಭವಿಸುತ್ತ ಹೇಳಿದಂತೆ ಕೇಳಿಕೊಂಡಿರುವ ಸ್ಥಿತಿಯೂ ಇದೇ. ಇವೆಲ್ಲಕ್ಕೂ ಅನೇಕ ಸಲ ಬಡತನ, ಅಭದ್ರತೆ, ಕೌಟುಂಬಿಕ ಕಾರಣಗಳಿರುತ್ತವೆ. ತಪ್ಪಿಸಿಕೊಳ್ಳಲಿಕ್ಕಾಗದ ವಿಷವರ್ತುಲದಲ್ಲಿ ಸಿಲುಕಿಕೊಂಡಂಥ ಸ್ಥಿತಿಯಿರುತ್ತದೆ.
ಬಾಲಕಾರ್ಮಿಕ ಪದ್ಧತಿ ಕೂಡ ಇದರ ರೂಪವೇ. ಈ ಸಾಮಾಜಿಕ ಪಿಡುಗು ವಿಶ್ವಸಂಸ್ಥೆಯ ಪ್ರಕಾರ ಸುಮಾರು 15 ಕೋಟಿ ಮಕ್ಕಳನ್ನು ಬಾಧಿಸುತ್ತಿದೆ. ಪ್ರತೀ ಹತ್ತರಲ್ಲಿ ಒಂದು ಮಗು ಬಾಲಕಾರ್ಮಿಕ ಪದ್ಧತಿಗೆ ತುತ್ತಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಮಕ್ಕಳ ಬಲವಂತದ ಮದುವೆಯೂ ಅವರನ್ನು ಗುಲಾಮಗಿರಿಗೆ ಒಳಪಡಿಸಿದಂತೆ ಎಂದೇ ಪರಿಗಣಿತವಾಗುತ್ತದೆ. ಜಗತ್ತಿನಲ್ಲಿ ಲೈಂಗಿಕ ವೃತ್ತಿಗೆ ತಳ್ಳಲ್ಪಟ್ಟ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಸಂಖ್ಯೆ ಕೂಡ ಈ ಕರಾಳತೆಯ ಮತ್ತೊಂದು ಮುಖವನ್ನು ಕಾಣಿಸುವಷ್ಟು ದೊಡ್ಡ ಪ್ರಮಾಣದಲ್ಲಿದೆ. ಯಾಕೆಂದರೆ ಚರಿತ್ರೆ ದುರ್ಬಲರ ಪರವಾಗಿ ಮಾತನಾಡದಂತೆ ಆಯಾ ಕಾಲಘಟ್ಟದಲ್ಲಿ ತಡೆಯುವ ಬೇರೆ ಶಕ್ತಿಗಳಿರುತ್ತವೆ. ಈ ಶಕ್ತಿಯೇ ಗುಲಾಮಗಿರಿಯನ್ನು ಹಾಗೆಯೇ ಉಳಿಸುವುದು ಕೂಡ.
ಗುಲಾಮಗಿರಿ ತೊಡೆದುಹಾಕುವಲ್ಲಿನ ಮೊದಲ ಅಡ್ಡಿ ರಾಜಕೀಯ ಇಚ್ಛಾಶಕ್ತಿಯ ಕೊರತೆ. ಇಂಥ ಅಡ್ಡಿಯ ಹೊರತಾಗಿಯೂ ಈ ಸಮಾಜ ನೋಡುವ ದೃಷ್ಟಿ ಬದಲಾದರೆ, ಅಲ್ಲೊಂದು ಜೀವಪರ ಮತ್ತು ಮಾನವೀಯ ಕಳಕಳಿ ಕಾಣಲಿದೆ. ಇಂಥ ಅನಿಷ್ಠ ಪದ್ಧತಿ ದೂರಗೊಳ್ಳುವುದು ಸಾಧ್ಯವಾಗುತ್ತದೆ. ಆದರೆ ಇಂಥದೊಂದು ಸುಂದರ ಕನಸು ಸಾಕಾರಗೊಳ್ಳುವುದು ಎಂದು ಎಂಬುದೇ ಪ್ರಶ್ನೆ.

Similar News