ನೂರು ಮಂದಿ ಶಾಸಕರನ್ನು ತನ್ನಿ ಹಾಗೂ ರಾಜ್ಯದ ಮುಖ್ಯಮಂತ್ರಿಯಾಗಿ: ಅಖಿಲೇಶ್ ಯಾದವ್

ಉತ್ತರ ಪ್ರದೇಶ ಡಿಸಿಎಂಗಳಿಗೆ ಸಮಾಜವಾದಿ ಪಕ್ಷದ ವಿಶೇಷ 'ಆಫರ್' !

Update: 2022-12-02 03:09 GMT

ಲಕ್ನೋ: "ನೂರು ಮಂದಿ ಶಾಸಕರನ್ನು ತನ್ನಿ ಹಾಗೂ ರಾಜ್ಯದ ಮುಖ್ಯಮಂತ್ರಿಯಾಗಿ" ಇದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ (Samajwadi Party chief Akhilesh Yadav) ಅವರು ಉತ್ತರ ಪ್ರದೇಶದ ಇಬ್ಬರು ಉಪಮುಖ್ಯಮಂತ್ರಿಗಳಾದ ಕೇಶವ ಮೌರ್ಯ ಮತ್ತು ಬೃಜೇಶ್ ಪಾಠಕ್ ಅವರಿಗೆ ನೀಡಿದ ವಿಶೇಷ ಆಫರ್! ಎಂದು hindustantimes.com ವರದಿ ಮಾಡಿದೆ.

ರಾಮಪುರದಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಅಖಿಲೇಶ್ ಯಾದವ್, "ರಾಜ್ಯದಲ್ಲಿ ಇಬ್ಬರು ಉಪ ಮುಖ್ಯಮಂತ್ರಿಗಳಿದ್ದಾರೆ. ಇಬ್ಬರೂ ಮುಖ್ಯಮಂತ್ರಿಯಾಗಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ನಾವು ಇದೀಗ ಅವರಿಗೆ ಆಫರ್ ನೀಡುತ್ತಿದ್ದೇವೆ. 100 ಮಂದಿ ಶಾಸಕರನ್ನು ಕರೆ ತನ್ನಿ. ನಾವು ನಿಮ್ಮೊಂದಿಗೆ ಇದ್ದೇವೆ. ಯಾವಾಗ ಬೇಕೋ ಆಗ ನೀವು ಸಿಎಂ ಆಗಬಹುದು" ಎಂದು ಹೇಳಿದರು.

ಸುಳ್ಳು ಪ್ರಕರಣಗಳನ್ನು ದಾಖಲಿಸಿ ಸಮಾಜವಾದಿ ಪಕ್ಷದ ಮುಖಂಡ ಅಝಾಂ ಖಾನ್ ಅವರಿಗೆ ಉತ್ತರ ಪ್ರದೇಶ ಸರ್ಕಾರ ಕಿರುಕುಳ ನೀಡುತ್ತಿದೆ ಎಂದೂ ಅಖಿಲೇಶ್ ಯಾದವ್ ಈ ಸಂದರ್ಭ ಆಪಾದಿಸಿದರು.

"ಕಾಲಕ್ಕಿಂತ ಬಲಿಷ್ಠ ಯಾವುದೂ ಅಲ್ಲ. ದೌರ್ಜನ್ಯ ಎಸಗುತ್ತಿರುವವರಿಗೆ ನಾನು ಹೇಳಬಯಸುವುದೇನೆಂದರೆ, ಪ್ರಸಕ್ತ ಮುಖ್ಯಮಂತ್ರಿಯ ಕಡತವನ್ನು ನಾನು ಸಿಎಂ ಆಗಿದ್ದಾಗ ನನ್ನ ಮುಂದೆ ಪ್ರಸ್ತುತಪಡಿಸಲಾಗಿತ್ತು. ಆದರೆ ಸಮಾಜವಾದಿಗಳಾದ ನಾವು ದ್ವೇಷ ರಾಜಕಾರಣ ಮಾಡುವುದಿಲ್ಲ ಅಥವಾ ಇನ್ನೊಬ್ಬರನ್ನು ದ್ವೇಷಿಸುವುದಿಲ್ಲ. ನಾನು ಯೋಗಿ ಆದಿತ್ಯನಾಥ್ ವಿರುದ್ಧದ ಕಡತವನ್ನು ಮರಳಿಸಿದ್ದೆ. ನನ್ನ ಮೇಲೆ ವಿಶ್ವಾಸ ಇಲ್ಲದಿದ್ದರೆ, ಅಧಿಕಾರಿಗಳನ್ನು ಕೇಳಿ" ಎಂದು ಬಹಿರಂಗಪಡಿಸಿದರು ಎಂದು hindustantimes.com ವರದಿ ಮಾಡಿದೆ.

Similar News