ಕನ್ನಡಿಗರ ಅಭಿವೃದ್ಧಿ, ರಕ್ಷಣೆಗೆ ಸರಕಾರ ಬದ್ಧ, ಬೆಳಗಾವಿ ಕರ್ನಾಟಕದ ಕಿರೀಟ: ಮುಖ್ಯಮಂತ್ರಿ ಬೊಮ್ಮಾಯಿ

''ಗಡಿಭಾಗದ ಶಾಲೆಗಳ ಅಭಿವೃದ್ಧಿಗೆ 100 ಕೋಟಿ ರೂ. ವೆಚ್ಚ''

Update: 2022-12-02 13:55 GMT

ಬೆಳಗಾವಿ, ಡಿ.2: ಕನ್ನಡಿಗರ ಅಭಿವೃದ್ಧಿ ಹಾಗೂ ರಕ್ಷಣೆ ಸರಕಾರದ ಜವಾಬ್ದಾರಿಯಾಗಿದೆ. ಕನ್ನಡಿಗರು ವಿಶ್ವದ ಯಾವುದೇ ಮೂಲೆಯಲ್ಲಿರಲಿ ಅಥವಾ ದೇಶದ ಯಾವುದೇ ರಾಜ್ಯದಲ್ಲಿರಲಿ ಅವರ ಅಭಿವೃದ್ಧಿಗೆ ಬದ್ಧವಾಗಿದ್ದು, ಈ ರಾಜ್ಯದ ನಾಡು-ನುಡಿ ಅಭಿವೃದ್ಧಿಪಡಿಸುವುದು ಸರಕಾರದ ಸಂಕಲ್ಪವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ರಾಮದುರ್ಗ ತಾಲೂಕಿನ ತಾಲೂಕಿನ ಅಂದಾಜು 671.28 ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಸರಕಾರ ಜನಪ್ರಿಯವಾದರೆ ಸಾಲದು. ಜನಪರ ಸರಕಾರ ಇದ್ದಾಗ ಮಾತ್ರ ಕಟ್ಟ ಕಡೆಯ ಗ್ರಾಮಕ್ಕೂ ಅಭಿವೃದ್ಧಿ ಯೋಜನೆಗಳು ತಲುಪುತ್ತವೆ. ನಮ್ಮ ಸರಕಾರ ಸಮಗ್ರ ಕರ್ನಾಟಕದ ಅಭಿವೃದ್ಧಿ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಮಹಾರಾಷ್ಟ್ರ, ತಮಿಳುನಾಡು, ಗೋವಾ ಹಾಗೂ ತೆಲಂಗಾಣ ರಾಜ್ಯದ ಗಡಿಭಾಗದಲ್ಲಿರುವ ರಾಜ್ಯದ ಜಿಲ್ಲೆಗಳಲ್ಲಿ 1800 ಗ್ರಾಮ ಪಂಚಾಯತಿ ಅಭಿವೃದ್ಧಿಪಡಿಸುವ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಅದೇ ರೀತಿ ರಸ್ತೆಗಳ ಸುಧಾರಣೆಗೆ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಗಡಿಭಾಗದ ಶಾಲೆಗಳ ಅಭಿವೃದ್ಧಿಗೆ 100 ಕೋಟಿ: ಗಡಿಯಾಚೆ ಇರುವವರು ನಮ್ಮವರು. ಅಲ್ಲಿನ ಕನ್ನಡ ಶಾಲೆಗಳನ್ನು ಅಲ್ಲಿನ ರಾಜ್ಯ ಸರಕಾರ ಕಡೆಗಣಿಸಿರುವುದರಿಂದ ಮೂಲಸೌಕರ್ಯ ಕಲ್ಪಿಸುವುದು ಸಾಧ್ಯವಾಗಿಲ್ಲ. ಗಡಿಭಾಗದ ಶಾಲೆಗಳ ಅಭಿವೃದ್ದಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಇದೇ ವರ್ಷ 100 ಕೋಟಿ ರೂಪಾಯಿ ಖರ್ಚು ಮಾಡಲಾಗುವುದು ಎಂದು ಅವರು ತಿಳಿಸಿದರು. 

ಗೋವಾದಲ್ಲಿ ಹತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ನಿರ್ಧಾರ ಮಾಡಲಾಗಿದೆ. ಅದೇ ರೀತಿ ಸೊಲ್ಲಾಪುರ ಹಾಗೂ ಕಾಸರಗೋಡಿನಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ತಲಾ ಹತ್ತು ಕೋಟಿ ರೂಪಾಯಿಗಳನ್ನು ಸರಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಪ್ರಕಟಿಸಿದರು.

ರಾಮದುರ್ಗ ತಾಲೂಕಿನ ಕೆಲ ಗ್ರಾಮಗಳು ಪದೇ ಪದೆ ಪ್ರವಾಹದಿಂದ ಬಾಧಿತಗೊಳ್ಳುವುದನ್ನು ತಪ್ಪಿಸಲು ಮಲಪ್ರಭಾ ನದಿ ತೀರದಲ್ಲಿ ತಡೆಗೋಡೆ ನಿರ್ಮಿಸಲು ಸರಕಾರ ಮುಂದಾಗಿದೆ. ಏತ ನೀರಾವರಿಯಿಂದ ವಂಚಿತಗೊಂಡಿರುವ 19 ಗ್ರಾಮಗಳ ಕೆರೆ ತುಂಬಿಸುವ ಯೋಜನೆಗೆ ಡಿಪಿಆರ್ ತಯಾರಿಸಿ ಮುಂದಿನ ಬಜೆಟ್ ನಲ್ಲಿ ಅನುದಾನ ತೆಗೆದಿರಿಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು.

ಬೆಳಗಾವಿ ಕರ್ನಾಟಕದ ಕಿರೀಟ: ಅತೀ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯು ರಾಜ್ಯದ ಕಿರೀಟವಿದ್ದಂತೆ. ಈ ಜಿಲ್ಲೆಯ ನೀರಾವರಿ, ಕೈಗಾರಿಕೋದ್ಯಮ, ಕೃಷಿ ಅಭಿವೃದ್ಧಿಗೆ ಸರಕಾರ ನೆರವು ನೀಡಲಿದೆ. ಉತ್ತರ ಕರ್ನಾಟಕದ ಸಮಗ್ರ ಪ್ರಗತಿಗೆ ಮುಂಬರುವ ದಿನಗಳಲ್ಲಿ ಸರಕಾರ ವಿಶೇಷ ಯೋಜನೆ ಪ್ರಕಟಿಸಲಿದೆ ಎಂದು ಅವರು ಹೇಳಿದರು.

ಬಸವೇಶ್ವರ ಪುತ್ಥಳಿ ಅನಾವರಣ: ಇದಕ್ಕೂ ಮುನ್ನ ರಾಮದುರ್ಗದ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರರ ಕಂಚಿನ ಪುತ್ಥಳಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನಾವರಣಗೊಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ರಾಮದುರ್ಗ ಶಾಸಕ ಮಹಾದೇವಪ್ಪ ದೊಡ್ಡವಾಡ ವಹಿಸಿದ್ದರು. ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಸಿ.ಸಿ.ಪಾಟೀಲ್, ಮುರುಗೇಶ್ ನಿರಾಣಿ, ಬಿ.ಎ.ಬಸವರಾಜ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ, ಮಂಗಳ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಉಪಸ್ಥಿತರಿದ್ದರು.

Similar News