ಪ್ರಜಾಪ್ರಭುತ್ವದಲ್ಲಿ ಏನು ಮಾಡಬೇಕು ಎಂಬ ಬಗ್ಗೆ ನಮಗೆ ಪಾಠ ಬೇಡ: ವಿಶ್ವಸಂಸ್ಥೆಯಲ್ಲಿ ಭಾರತ

Update: 2022-12-02 16:11 GMT

ಹೊಸದಿಲ್ಲಿ, ಡಿ. 2: ‘‘ಪ್ರಜಾಪ್ರಭುತ್ವದಲ್ಲಿ ಏನು ಮಾಡಬೇಕು’’ ಎಂಬ ಬಗ್ಗೆ ಭಾರತಕ್ಕೆ ಯಾರೂ ಏನೂ ಹೇಳಿಕೊಡಬೇಕಾಗಿಲ್ಲ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್(
Ruchira Kamboj) ಗುರುವಾರ ಹೇಳಿದ್ದಾರೆ.

15 ಸದಸ್ಯರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆಯನ್ನು ಡಿಸೆಂಬರ್ ತಿಂಗಳ ಅವಧಿಗೆ ವಹಿಸಿಕೊಂಡ ಬಳಿಕ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಬೋಜ್ ಈ ಹೇಳಿಕೆ ನೀಡಿದ್ದಾರೆ. ಭದ್ರತಾ ಮಂಡಳಿಯ ಅಧ್ಯಕ್ಷತೆಯು ಪ್ರತಿ ತಿಂಗಳು ಸದಸ್ಯ ದೇಶಗಳ ನಡುವೆ ಬದಲಾಗುತ್ತಾ ಇರುತ್ತದೆ.

ಭಾರತದ ಪ್ರಜಾಪ್ರಭುತ್ವದ ಬೇರುಗಳು 2,500 ವರ್ಷಗಳ ಹಿಂದೆಯೇ ಭಾರತದಲ್ಲಿ ಬೇರುಬಿಟ್ಟಿದ್ದವು. ಹಿಮಾಲಯ ವಲಯದಲ್ಲಿದ್ದ ಶಾಕ್ಯ ರಾಜವಂಶ ಮತ್ತು ಲಿಚ್ಛವಿ ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಿತ್ತು ಎಂದು ಅವರು ಹೇಳಿಕೊಂಡರು.

ಭಾರತದಲ್ಲಿನ ಪ್ರಜಾಪ್ರಭುತ್ವ ಮತ್ತು ಪತ್ರಿಕಾ ಸ್ವಾತಂತ್ರ್ಯದ ಕುರಿತ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.

‘‘ತೀರಾ ಇತ್ತೀಚಿನ ಸಮಯದ ಬಗ್ಗೆ ಹೇಳುವುದಾದರೆ, ನಮ್ಮಲ್ಲಿ ಪ್ರಜಾಪ್ರಭುತ್ವದ ಎಲ್ಲಾ ನಾಲ್ಕು ಕಂಬಗಳಿವೆ- ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ನಾಲ್ಕನೇ ಕಂಬ ಪತ್ರಿಕಾ ಮಾಧ್ಯಮ. ಜೊತೆಗೆ ಅತ್ಯಂತ ಜೀವಂತಿಕೆಯ ಸಾಮಾಜಿಕ ಮಾಧ್ಯಮವಿದೆ’’ ಎಂದರು. ‘‘ದೇಶವು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವಾಗಿದೆ. ನಿಮಗೆ ಗೊತ್ತಿರುವಂತೆ, ಪ್ರತಿ ಐದು ವರ್ಷಗಳಿಗೊಮ್ಮೆ ನಾವು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ನಡೆಸುತ್ತೇವೆ’’ ಎಂದು ಅವರು ಹೇಳಿದರು.

‘‘ದೇಶದಲ್ಲಿರುವ ಎಲ್ಲರಿಗೂ ತಮಗೆ ಹೇಳಬೇಕಾಗಿರುವುದನ್ನು ಹೇಳುವ ಸ್ವಾತಂತ್ರ್ಯವಿದೆ ಹಾಗೂ ಭಾರತವಿರುವುದು ಹೀಗೆ’’ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿ ಹೇಳಿದರು.

Similar News