ಪಾಟ್ನಾದ ಬೀದಿಬಾಲಕನಿಗೆ ಅಮೆರಿಕ ವಿಮಾನ ಏರುವ ಯೋಗ !

Update: 2022-12-03 03:14 GMT

ಪಾಟ್ನಾ: ಪಾಟ್ನಾದ ಬೀದಿಗಳಲ್ಲಿ ಬೆಳೆದ ಎಂಟು ವರ್ಷದ ಪುಟ್ಟ ಬಾಲಕ ಇದೀಗ ಅಪಾರ ನಿರೀಕ್ಷೆಯ ಕನಸುಗಳೊಂದಿಗೆ ತನ್ನ ಬಾಳಿನ ಹೊಸ ಅಧ್ಯಾಯಕ್ಕಾಗಿ ಅಮೆರಿಕದ ವಿಮಾನ ಏರಲು ಸಜ್ಜಾಗಿದ್ದಾನೆ ಎಂದು ndtv.com ವರದಿ ಮಾಡಿದೆ.

ಮೂರು ವರ್ಷದ ಹಿಂದೆ ಕೊರೆಯುವ ಚಳಿಯಲ್ಲಿ ಈ ವಿಶೇಷ ಚೇತನ ಅನಾಥ ಬಾಲಕ ಪಾಟ್ನಾ ಬೀದಿಯಲ್ಲಿ ಪತ್ತೆಯಾಗಿದ್ದ. ಆದರೆ ಇದೀಗ ಅಮೆರಿಕದ ದಂಪತಿ ಈತನನ್ನು ದತ್ತು ಪಡೆದ ಹಿನ್ನೆಲೆಯಲ್ಲಿ ಬಾಲಕನ ಬಾಲ್ಯದಲ್ಲಿ ಭಾಗ್ಯದ ಬಾಗಿಲು ತೆರೆದಿದೆ. ಎಲ್ಲ ಅಗತ್ಯ ವಿಧಿವಿಧಾನಗಳನ್ನು ಪೂರೈಸಿದ ಅಮೆರಿಕನ್ ದಂಪತಿ ಪಾಟ್ನಾಗೆ ಆಗಮಿಸಿ ದತ್ತುಪುತ್ರನೊಂದಿಗೆ ಸ್ವದೇಶಕ್ಕೆ ವಾಪಸ್ಸಾಗಲು ಸಜ್ಜಾಗಿದೆ ಎಂದು ತಿಳಿದು ಬಂದಿದೆ.

ಅಮೆರಿಕದಲ್ಲಿ ಈ ಬಾಲಕನ ವೈದ್ಯಕೀಯ ಚಿಕಿತ್ಸೆಗೆ ಈ ದಂಪತಿ ನೆರವು ನೀಡಲಿದ್ದಾರೆ. ಕರ್ನಲ್ ಮಿಲ್ಲರ್ ಮತ್ತು ಕ್ಯಾಥಲೀನ್ ಮಿಲ್ಲೆರ್ ಅವರು ಈ ಎಂಟು ವರ್ಷದ ಅನಾಥ ಬಾಲಕನನ್ನು ದತ್ತು ಪಡೆಯುವ ಅಪೇಕ್ಷೆ ವ್ಯಕ್ತಪಡಿಸಿದ್ದರು.

ಇದೀಗ ಅಗತ್ಯ ವಿಧಿವಿಧಾನ ಪೂರೈಸಿ ಮಗುವಿನ ಪಾಸ್‍ಪೋರ್ಟ್‍ಗೆ ಅರ್ಜಿ ಸಲ್ಲಿಸಿದ್ದು, ಗುರುತಿನ ದಾಖಲೆ ಸಿದ್ಧವಾದ ತಕ್ಷಣ ಬಾಲಕ ಅಮೆರಿಕಕ್ಕೆ ಹಾರಲಿದ್ದಾನೆ. ಆರ್ಜಿತ್ ಈ ದಂಪತಿಯ ನಾಲ್ಕನೇ ದತ್ತು ಮಗುವಾಗಿದ್ದು, ಏಕೈಕ ದತ್ತುಪುತ್ರ ಎಂದು ndtv.com ವರದಿ ಮಾಡಿದೆ.

Similar News