ಬಂಗಾಳಿಗಳನ್ನು ಅವಮಾನಿಸಿ ಹೇಳಿಕೆ ನೀಡಿದ್ದ ನಟ ಪರೇಶ್ ರಾವಲ್ ವಿರುದ್ಧ ಪೊಲೀಸ್ ಕೇಸ್

Update: 2022-12-03 07:44 GMT

ಹೊಸದಿಲ್ಲಿ: "ಗುಜರಾತ್ (Gujarat) ರಾಜ್ಯದ ಜನರು ಹಣದುಬ್ಬರವನ್ನು ಸಹಿಸಿಕೊಳ್ಳುತ್ತಾರೆ ಆದರೆ `ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯರನ್ನಲ್ಲ' ಗ್ಯಾಸ್ ಸಿಲಿಂಡರ್‍ಗಳು ದುಬಾರಿಯಾಗಿವೆ, ಆದರೆ ಅವುಗಳ ಬೆಲೆ ಕಡಿಮೆಯಾಗಲಿವೆ. ಜನರಿಗೆ ಉದ್ಯೋಗ ಕೂಡ ದೊರೆಯಲಿದೆ. ಆದರೆ ರೋಹಿಂಗ್ಯ ವಲಸಿಗರು ಮತ್ತು ಬಾಂಗ್ಲಾದೇಶಿಗಳು ದಿಲ್ಲಿಯಂತೆ ಇಲ್ಲಿಯೂ ನಿಮ್ಮ ಸುತ್ತಮುತ್ತ ವಾಸಿಸಲು ಆರಂಭಿಸಿದರೆ ಏನಾಗುತ್ತದೆ? ಗ್ಯಾಸ್ ಸಿಲಿಂಡರ್‍ಗಳೊಂದಿಗೆ ನೀವು ಏನು ಮಾಡುತ್ತೀರಿ? ಬಂಗಾಳಿಗಳಿಗೆ ಮೀನು ಬೇಯಿಸುತ್ತೀರಾ?," ಎಂದು ಮಂಗಳವಾರ ಗುಜರಾತ್‍ನ ವಲ್ಸಾಡ್‍ನಲ್ಲಿ ಚುನಾವಣಾ ಪ್ರಚಾರ ವೇಳೆ ಹೇಳಿ ಟೀಕೆಗೊಳಗಾಗಿ ನಂತರ ಕ್ಷಮೆಯಾಚಿಸಿದ್ದ ನಟ ಪರೇಶ್ ರಾವಲ್ (Paresh Rawal) ಇದೀಗ ಪೊಲೀಸ್ ಕೇಸ್ ಎದುರಿಸುತ್ತಿದ್ದಾರೆ.

ಸಿಪಿಐ(ಎಂ) ನಾಯಕ ಹಾಗೂ ಮಾಜಿ ಸಂಸದ ಮುಹಮ್ಮದ್ ಸಲೀಂ ಅವರು ಕೊಲ್ಕತ್ತಾದ ತಾಲ್ತಲಾ ಪೊಲೀಸ್ ಠಾಣೆಗೆ ಈ ಕುರಿತು ದೂರು ನೀಡಿದ್ದು, ನಟನ  ಹೇಳಿಕೆಯು ಬಂಗಾಳಿಗಳ ವಿರುದ್ಧ ಕೆಟ್ಟ ಅಭಿಪ್ರಾಯ ಮೂಡಿಸುವುದರಿಂದ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

"ಪಶ್ಚಿಮ ಬಂಗಾಳದ ಹೊರಗೆ ಕೂಡ ಹಲವು ಬಂಗಾಳಿಗಳು ವಾಸಿಸುತ್ತಾರೆ, ಪರೇಶ್ ರಾವಲ್ ಅವರ ಹೇಳಿಕೆಯಿಂದ ಇಂತಹ ಜನರು ಬಾಧಿತರಾಗುತ್ತಾರೆ,'' ಎಂದು ಸಲೀಂ ತಮ್ಮ ದೂರಿನಲ್ಲಿ ಹೇಳಿದ್ದಾರೆ. ದ್ವೇಷವನ್ನು ಪ್ರೋತ್ಸಾಹಿಸಿದ್ದಕ್ಕಾಗಿ, ಉದ್ದೇಶಪೂರ್ವಕವಾಗಿ ಅವಮಾನಿಸಿದ್ದಕ್ಕಾಗಿ ಅವರ ವಿರುದ್ಧ ಐಪಿಸಿ ವಿವಿಧ ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಬೇಕು ಎಂದು ಸಲೀಂ ಆಗ್ರಹಿಸಿದ್ದಾರೆ.

Similar News