ಹೆಜಮಾಡಿ ಟೋಲ್ ಸಮಸ್ಯೆಗೆ ಶೀಘ್ರ ಪರಿಹಾರ: ಸುನೀಲ್ ಕುಮಾರ್

ಉಡುಪಿಯ ಜನಪ್ರತಿನಿಧಿ- ಅಧಿಕಾರಿಗಳ ಸಭೆಯಲ್ಲಿ ಮಹತ್ವದ ನಿರ್ಧಾರ

Update: 2022-12-03 11:02 GMT

ಉಡುಪಿ, ಡಿ.3: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ತಪ್ಪಿನಿಂದ ಸುರತ್ಕಲ್ ಟೋಲ್‌ಗೇಟ್‌ನ ಸುಂಕವನ್ನು ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಸಂಗ್ರಹಿಸಬೇಕೆಂಬ ಅವೈಜ್ಞಾನವಿಕ ವ್ಯವಸ್ಥೆ ಬಗ್ಗೆ ದೆಹಲಿ ಹಂತದಲ್ಲಿ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಗಿದೆ ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಉಡುಪಿ ತಾಲೂಕು ಕಚೇರಿಯಲ್ಲಿಂದು ಹೆಜಮಾಡಿ ಟೋಲ್ ವಿಚಾರವಾಗಿ ನಡೆದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆಯ ಬಳಿಕ ಅವರು ತೆಗೆದುಕೊಂಡ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಈ ಸಂಬಂಧ ಸಂಸದರ ಜೊತೆ ಮಾತನಾಡಿ ದೆಹಲಿಗೆ ಭೇಟಿ ನೀಡಿ ಹೆಜಮಾಡಿ ಟೋಲ್‌ನ ಸಾಧಕ ಬಾಧಕ ಮತ್ತು ಒಂದು ಟೋಲ್‌ನ ಹೊರೆಯನ್ನು ಇನ್ನೊಂದು ಟೋಲ್ ವರ್ಗಾಯಿಸುವ ಅವೈಜ್ಞಾನಿಕ ವ್ಯವಸ್ಥೆ ಬಗ್ಗೆ ದೆಹಲಿ ಹಂತದಲ್ಲಿ ಮನವರಿಕೆ ಮಾಡಿಕೊಡಲಾಗುವುದು ಎಂದರು.

ಸುರತ್ಕಲ್ ಟೋಲ್ ರದ್ದು ಮಾಡುವ ವೇಗದಲ್ಲಿ ಅದರ ಇಡೀ ಭಾರವನ್ನು ಹೆಜಮಾಡಿ ಟೋಲ್‌ಗೆ ವರ್ಗಾಯಿಸುವಂತಹ ಆದೇಶ ಇದೀಗ ಬಂದಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವಾರದ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಉಡುಪಿ ವಾಹನಗಳಿಗೆ ರಿಯಾಯಿತಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಎರಡು ವಿಚಾರ ಪ್ರಸ್ತಾಪ ಮಾಡುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಹೆಜಮಾಡಿ ಟೋಲ್‌ನಲ್ಲಿ ಉಡುಪಿ ಜಿಲ್ಲೆಯ ಎಲ್ಲ ವಾಹನಗಳಿಗೆ ರಿಯಾಯಿತಿ ನೀಜಡಬೇಕು. ಇಲ್ಲಿನ ವಾಹನಗಳಿಂದ ಮೊದಲಿನಷ್ಟೆ ಸುಂಕ ಸಂಗ್ರಹ ಮಾಡಬೇಕು. ಹೆಚ್ಚುವರಿ ಸುಂಕ ವಸೂಲಿ ಮಾಡ ಬಾರದು. ಅದಕ್ಕಾಗಿ ಪ್ರತ್ಯೇಕ ಮಾರ್ಗದ ವ್ಯವಸ್ಥೆ ಕೂಡ ಮಾಡಬೇಕು ಎಂದು ಸಚಿವ ಸುನೀಲ್ ಕುಮಾರ್ ಹೇಳಿದರು.

ಸುರತ್ಕಲ್ ಟೋಲ್‌ನಿಂದ ಹೆಜಮಾಡಿ ಟೋಲ್‌ಗೆ ವರ್ಗಾಯಿಸಿರುವ ಸುಂಕದ ಹೊರೆಯನ್ನು ಯಾವ ರೀತಿ ನಿಬಾಯಿಸಬೇಕು ಎಂಬುದರ ಬಗ್ಗೆ ದೆಹಲಿ ಹಂತದಲ್ಲಿ ಮಾತಕತೆ ನಡೆಸಲಾಗುವುದು. ಈ ಹೊರೆಯನ್ನು ಕೇವಲ ಹೆಜ ಮಾಡಿಗೆ ಮಾತ್ರ ಹೊರಿಸದೆ ಬೇರೆ ರಿಯಾಯಿತಿ ನೀಡುವ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ ಮಾಡಬೇಕು. ಅಲ್ಲಿಯವರೆಗೆ ಹೊಸ ಸಂಗ್ರಹ ಮಾಡಬಾರದು ಎಂಬ ಪ್ರಸ್ತಾಪ ಸಲ್ಲಿಸುವ ಬಗ್ಗೆ ನಿರ್ಣಯಿಸಲಾಯಿತು. ಈ ಕುರಿತು ಸಚಿವ ಅಂಗಾರ ಇಂದೇ ಮುಖ್ಯಮಂತ್ರಿ ಜೊತೆ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ. ಅದೇ ರೀತಿ ಶಾಸಕರುಗಳು ಕೂಡ ಸಿಎಂ ಜೊತೆ ಮಾತ ನಾಡಲಿದ್ದಾರೆ ಎಂದರು.

ಸುರತ್ಕಲ್ ಟೋಲ್ ಅಕ್ರಮ ಅಲ್ಲ:

ಸುರತ್ಕಲ್ ಟೋಲ್ ಅಕ್ರಮ ಎಂದು ನಾವು ಹೇಳುವುದಿಲ್ಲ. ಅವತ್ತು 25 ಕಿ.ಮೀ. ರಸ್ತೆ ನಿರ್ಮಿಸಿದಕ್ಕೆ ಟೋಲ್ ನಿರ್ಮಿಸಿ ಸುಂಕ ವಸೂಲಿ ಮಾಡುವ ವ್ಯವಸ್ಥೆಯನ್ನು ಆಗಿನ ಸರಕಾರ ಮಾಡಿತ್ತು. ಆಗಿನ ಒಡಂಬಡಿಕೆ 2035ರವರೆಗೆ ಮುಂದುವರೆಯುತ್ತದೆ. ಇದೀಗ ಕೆಲವರ ಒತ್ತಡಕ್ಕೆ ರದ್ದು ಮಾಡಿದ ಟೋಲ್‌ನ ಹೊರೆಯನ್ನು ಬೇರೆ ಟೋಲ್‌ಗೆ ಹೊರಿಸುವುದು ಅವೈಜ್ಞಾನಿಕ ಎಂಬುದು ಸ್ಪಷ್ಟ ಎಂದು ಅವರು ಹೇಳಿದರು.

ಯಾವುದೇ ಕಾರಣಕ್ಕೂ ನಮ್ಮ ಜಿಲ್ಲೆಯ ಜನರಿಗೆ ತೊಂದರೆ ಆಗಬಾರದು ಎಂಬುದು ನಮ್ಮ ಎಲ್ಲರ ಅಭಿಪ್ರಾಯ. ಇದು ಚುನಾವಣೆಯ ವಿಷಯ ಅಲ್ಲ. 2012-13ರಲ್ಲಿ ಅಂದಿನ ಸರಕಾರ ಸುರತ್ಕಲ್ ಟೋಲ್ ಕುರಿತು ಒಪ್ಪಂದ ಮಾಡಿಕೊಂಡು 2015ರಲ್ಲಿ ಜಾರಿಗೆ ತಂದಿತ್ತು. ಸುರತ್ಕಲ್ ಟೋಲ್‌ನ ಪಾಪದ ಕೂಸು 2012-13ರಲ್ಲಿ ಪ್ರಾರಂಭವಾಗಿರುವುದು. ಅವತ್ತು ಮಾಡಿದ ತಪ್ಪನ್ನು ಇವತ್ತು ನಾವು ಹೊತ್ತುಕೊಂಡಿದ್ದೇವೆ. ಆದರೆ ಅದಕ್ಕೆ ಬೆನ್ನು ತೋರಿಸುವ ಪ್ರಶ್ನೆಯೇ ಇಲ್ಲ. ಸರಳೀಕರಣ ಮಾಡಿ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಆನ್‌ಲೈನ್ ಮೂಲಕ ಸಭೆಯಲ್ಲಿ ಪಾಲ್ಗೊಂಡರು. ಸಭೆಯಲ್ಲಿ ಹಿಂದುಳಿಗ ವರ್ಗಗಳ ಆಯೋಗ ಅಧ್ಯಕ್ಷ ಕೆ.ಜಯ ಪ್ರಕಾಶ್ ಹೆಗ್ಡೆ, ಉಡುಪಿ ಶಾಸಕ ಕೆ.ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಜಿಲ್ಲಾಧಿಕಾರಿ ಕೂರ್ಮಾರಾವ್, ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೇ ಮಚ್ಚೀಂದ್ರ, ಅಪರ ಜಿಲ್ಲಾಧಿಕಾರಿ ವೀಣಾ ಮೊದಲಾದವರು ಹಾಜರಿದ್ದರು.

Similar News