ಖಜೂರಿ ಖಸ್ ಪ್ರಕರಣದಲ್ಲಿ ಉಮರ್ ಖಾಲಿದ್, ಖಾಲಿದ್ ಸೈಫಿಯನ್ನು ದೋಷಮುಕ್ತಗೊಳಿಸಿದ ನ್ಯಾಯಾಲಯ

ಈಶಾನ್ಯ ದಿಲ್ಲಿ ಹಿಂಸಾಚಾರ ಪ್ರಕರಣ

Update: 2022-12-03 11:16 GMT

ಹೊಸದಿಲ್ಲಿ: ಈಶಾನ್ಯ ದಿಲ್ಲಿಯಲ್ಲಿ 2020 ರಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ಒಂದು ಪ್ರಕರಣದಲ್ಲಿ ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್ (Umar Khalid) ಮತ್ತು ಯುನೈಟೆಡ್ ಅಗೇನ್ಸ್ಟ್ ಹೇಟ್ ಸದಸ್ಯ ಖಾಲಿದ್ ಸೈಫಿ (Khalid Saifi) ಅವರನ್ನು ದಿಲ್ಲಿಯ ನ್ಯಾಯಾಲಯವೊಂದು ಇಂದು ದೊಷಮುಕ್ತಗೊಳಿಸಿದೆ.

ಖಜೂರಿ ಖಸ್ (Khajuri Khas) ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‍ಐಆರ್ ಸಂಖ್ಯೆ 101/2020 ಪ್ರಕರಣದಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪುಲಸ್ತ್ಯ ಪ್ರಮಚಲ ಇಬ್ಬರನ್ನೂ ದೋಷಮುಕ್ತಗೊಳಿಸಿ ಈ ಆದೇಶ ಹೊರಡಿಸಿದ್ದಾರೆ.

ಈ ನಿರ್ದಿಷ್ಟ ಪ್ರಕರಣದಲ್ಲಿ ಪ್ರಸ್ತುತ ಖಾಲಿದ್ ಮತ್ತು ಸೈಫಿ ಜಾಮೀನಿನ ಮೇಲಿದ್ದಾರೆ ಆದರೆ ಯುಎಪಿಎ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅವರಿನ್ನೂ ನ್ಯಾಯಾಂಗ ಬಂಧನದಲ್ಲಿದ್ದು ಈ ಹಿಂಸಾಚಾರದ ಹಿಂದೆ ದೊಡ್ಡ ಸಂಚು ರೂಪಿಸಿದ್ದಾರೆಂಬ ಆರೋಪ ಅವರ ಮೇಲಿದೆ.

ಖಜೂರಿ ಖಸ್ ಪ್ರಕರಣದಲ್ಲಿ ಇಬ್ಬರ ಮೇಲೂ ಐಪಿಸಿ ಸೆಕ್ಷನ್ 109, 114, 147, 149, 153-ಎ, 212, 353. 427, 435, 436, 452, 454, 505, 34, 120-ಬಿ  ಮತ್ತು ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯಿದೆಯ ಸೆಕ್ಷನ್ 3 ಮತ್ತು 4 ಹಾಗೂ ಶಸ್ತ್ರಾಸ್ತ್ರ ಕಾಯಿದೆಯ ಸೆಕ್ಷನ್ 25 ಮತ್ತು 27 ಅಡಿ ಪ್ರಕರಣ ದಾಖಲಾಗಿತ್ತು.

ಪೊಲೀಸ್ ಕಾನ್‍ಸ್ಟೇಬಲ್ ಒಬ್ಬರ ಹೇಳಿಕೆಯ ಆಧಾರದಲ್ಲಿ ಈ ಪ್ರಕರಣ ದಾಖಲಾಗಿತ್ತು. ಫೆಬ್ರವರಿ 24, 2020 ರಂದು ಚಾಂದ್ ಬಾಘ್ ಪುಲಿಯಾ ಸಮೀಪ ದೊಡ್ಡ ಗುಂಪು ಸೇರಿತ್ತು ಮತ್ತು ಕಲ್ಲು ತೂರಾಟ ಆರಂಭಿಸಿತ್ತು, ಈ ಸಂದರ್ಭ ಕಾನ್‍ಸ್ಟೇಬಲ್ ತನ್ನನ್ನು ರಕ್ಷಿಸಿಕೊಳ್ಳಲು ಹತ್ತಿರದ ಪಾರ್ಕಿಂಗ್ ಸ್ಥಳಕ್ಕೆ ಹೋದರು, ಆಗ ಉದ್ರಿಕ್ತ ಗುಂಪು ಪಾರ್ಕಿಂಗ್ ಸ್ಥಳದ ಶಟರ್ ಮುರಿದು ಒಳಗಿದ್ದ ಜನರಿಗೆ ಥಳಿಸಿ ವಾಹನಗಳಿಗೆ ಬೆಂಕಿ ಹಚ್ಚಿತ್ತು ಎಂದು ಆರೋಪಿಸಲಾಗಿತ್ತು.

ಈ ಪ್ರಕರಣವನ್ನು ನಂತರ ಫೆಬ್ರವರಿ 28, 2020 ರಂದು ಕ್ರೈಂ ಬ್ರ್ಯಾಂಚ್‍ಗೆ ಹಸ್ತಾಂತರಿಸಲಾಗಿತ್ತು.

ಆಪ್‍ನ ಮಾಜಿ ಕೌನ್ಸಿಲರ್ ತಾಹಿರ್ ಹುಸೈನ್ ಅವರ ಕಟ್ಟಡವನ್ನು ಗಲಭೆಕೋರರು ಕಲ್ಲು ತೂರಾಟ ನಡೆಸಲು ಪೆಟ್ರೋಲ್ ಬಾಂಬ್ ಮತ್ತು ಆಸಿಡ್ ಬಾಂಬ್ ಎಸೆಯಲು ಬಳಸಿದ್ದರು ಎಂದು ಪ್ರಾಸಿಕ್ಯೂಶನ್ ಆರೋಪಿಸಿತ್ತಲ್ಲದೆ ಈ ವಸ್ತುಗಳು ಕಟ್ಟಡದ ಮೇಲ್ಛಾವಣಿ ಮತ್ತು ಮೂರನೇ ಅಂತಸ್ತಿನಲ್ಲಿ ಪತ್ತೆಯಾಗಿದ್ದವು ಎಂದೂ ಹೇಳಿತ್ತು.

ಉಮರ್ ಮತ್ತು ಖಾಲಿದ್ ಈ ಗುಂಪಿನ ಭಾಗವಾಗಿರದೇ ಇದ್ದರೂ ಈ ಪ್ರಕರಣದಲ್ಲಿ ಅವರು ಕ್ರಿಮಿನಲ್ ಸಂಚು ಹೂಡಿದ್ದರೆಂದು ಆರೋಪಿಸಲಾಗಿತ್ತು.

ಈ ಪ್ರಕರಣದಲ್ಲಿ ಈ ಹಿಂದೆ ಉಮರ್ ಖಾಲಿದ್‍ಗೆ ಜಾಮೀನು ನೀಡಿದ್ದ ನ್ಯಾಯಾಲಯ ಆತನ ವಿರುದ್ಧ ಅಸ್ಪಷ್ಟ  ಸಾಕ್ಷ್ಯದ ಆಧಾರದಲ್ಲಿ ಆತನನ್ನು ಬಂಧನದಲ್ಲಿ ಇರಿಸಿಕೊಳ್ಳಲು ಸಾಧ್ಯವಿಲ್ಲ ಎಂದಿತ್ತು.

Similar News