ತಮ್ಮ ಇಚ್ಛೆಯಂತೆ ಮನೆ ಕೆಡವುವ ಹಕ್ಕು ಪೊಲೀಸರಿಗಿದ್ದರೆ ಎಲ್ಲಾ ಕೋರ್ಟ್‌ಗಳನ್ನು ಮುಚ್ಚಿ: ಪಾಟ್ನಾ ಹೈಕೋರ್ಟ್ ತರಾಟೆ

Update: 2022-12-03 13:09 GMT

ಪಾಟ್ನಾ (ಬಿಹಾರ): ವ್ಯಕ್ತಿಯೊಬ್ಬರ ಮನೆಗೆ ಬುಲ್ಡೋಜರ್ ದಾಳಿ ಮಾಡಿದ ಆರೋಪದ ಮೇಲೆ ಪಾಟ್ನಾ ಹೈಕೋರ್ಟ್ (Patna High Court) ನ್ಯಾಯಾಧೀಶರು ಪ್ರಾಸಿಕ್ಯೂಷನ್ ಮತ್ತು ಪೊಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದ್ದು, ಸದ್ಯ ಇದರ ವಿಡಿಯೋ ವೈರಲ್ ಆಗಿದೆ.

ಪೊಲೀಸ್ ಇಲಾಖೆ ತನ್ನ ಮನೆಯನ್ನು ಧ್ವಂಸ ಗೊಳಿಸುವುದರ ವಿರುದ್ಧ ಅರ್ಜಿದಾರರ ಮನವಿಯನ್ನು ಗಮನಿಸಿದ ಪಾಟ್ನಾ ಹೈಕೋರ್ಟ್‌ನ ನ್ಯಾಯಮೂರ್ತಿ ಸಂದೀಪ್ ಕುಮಾರ್ ಅವರು ಪೊಲೀಸ್ ಇಲಾಖೆ ಮತ್ತು ಭೂ ಮಾಫಿಯಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪೊಲೀಸರು ಮತ್ತು ಅಧಿಕಾರಿಗಳು ಭೂಮಾಫಿಯಾದೊಂದಿಗೆ ಕೈಜೋಡಿಸುತ್ತಿದ್ದಾರೆ ಎಂದು ಹೇಳಿದ ನ್ಯಾಯಮೂರ್ತಿ ಕುಮಾರ್, "ಯಾರ ಮನೆಯನ್ನೂ ಧ್ವಂಸ ಮಾಡಬಹುದೆಂದು ಭಾವಿಸಿದ್ದೀರಾ” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ತಮ್ಮ ಇಚ್ಛೆಯಂತೆ ಮನೆಗಳನ್ನು ಕೆಡವುವ ಹಕ್ಕು ಪೊಲೀಸ್ ಇಲಾಖೆಗೆ ಇದ್ದರೆ ದೇಶದ ನ್ಯಾಯಾಲಯಗಳನ್ನು ಮುಚ್ಚಬೇಕು ಎಂದು ನ್ಯಾಯಮೂರ್ತಿ ಕುಮಾರ್   ಹೇಳಿದ್ದಾರೆ.

ಭೂಮಾಫಿಯಾಗಳ ಪ್ರೇರಣೆಯಿಂದ ಪೊಲೀಸರು ತನ್ನ ಹಾಗೂ ತನ್ನ ಕುಟುಂಬ ಸದಸ್ಯರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಅರ್ಜಿದಾರರ ಮನವಿಯನ್ನು ಆಲಿಸಿದ ನ್ಯಾಯಾಧೀಶರು, ಅರ್ಜಿದಾರ ಮತ್ತು ಅವರ ಕುಟುಂಬದ ಸದಸ್ಯರನ್ನು ಬಂಧಿಸದಂತೆ ಪೊಲೀಸರಿಗೆ ನಿರ್ಬಂಧಿಸಿದ್ದಾರೆ.

ಈ ಅಪರಾಧದಲ್ಲಿ ಭಾಗಿಯಾಗಿರುವವರ ಸ್ವಂತ ಹಣದಿಂದಲೇ ಅಕ್ರಮವಾಗಿ ಮನೆಗಳನ್ನು ಕೆಡವಲಾದ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗುವುದು ಎಂದು ನ್ಯಾಯಮೂರ್ತಿ ಕುಮಾರ್ ಹೇಳಿದರು.

ಪಾಟ್ನಾದಲ್ಲಿ ಪೊಲೀಸರು ಭೂ ಮಾಫಿಯಾದ ಏಜೆಂಟ್‌ಗಳಾಗಿದ್ದಾರೆ ಎಂದು ಅವರು ಹೇಳಿದರು.

"ಪೊಲೀಸ್ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಿದಾಗ ಮಾತ್ರ ಇಂತಹ ಅಕ್ರಮ ವ್ಯವಹಾರ ನಿಲ್ಲುತ್ತದೆ" ಎಂದು ಅವರು ಹೇಳಿದರು.

Similar News