ದತ್ತಜಯಂತಿ ಹಿನ್ನೆಲೆ; ಡಿ.5ರಿಂದ ಡಿ.9ರ ಬೆಳಗ್ಗೆ 10ರವರೆಗೆ ಪ್ರವಾಸಿಗರಿಗೆ ನಿರ್ಬಂಧ: ಜಿಲ್ಲಾಧಿಕಾರಿ ಕೆ.ಎನ್.ರಮೇಶ್

Update: 2022-12-03 13:58 GMT

ಚಿಕ್ಕಮಗಳೂರು, ಡಿ.3: ಜಿಲ್ಲೆಯಲ್ಲಿ ಡಿ.6, 7 ಮತ್ತು 8ರಂದು ದತ್ತ ಜಯಂತಿ ಕಾರ್ಯಕ್ರಮ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು.

ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಕ್ತರು ಬಾಬಾಬುಡನ್‍ಗಿರಿಗೆ ತೆರಳಲು ಅನುಕೂಲವಾಗುವಂತೆ ಸರಕಾರಿ ಸಾರಿಗೆ ಬಸ್‍ಗಳನ್ನು ಕಲ್ಪಿಸಲಾಗಿದೆ. ಕುಡಿಯುವ ನೀರು ಶೌಚಾಲಯ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದ ಅವರು, ಡಿ.5ರಂದು ಬೆಳಗ್ಗೆ 6ರಿಂದ ರಿಂದ ಡಿ.9ರ ಬೆಳಗ್ಗೆ 10ರವರೆಗೆ ಪ್ರವಾಸಿಗರಿಗೆ ಗಿರಿ ವ್ಯಾಪ್ತಿಯಲ್ಲಿ ನಿಷೇಧ ವಿಧಿಸಲಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಮಾತನಾಡಿ, ಡಿ.6ರಿಂದ 8ವರೆಗೆ ದತ್ತಜಯಂತಿ ನಡೆಯಲಿದ್ದು, ಶೋಭಾಯಾತ್ರೆಯಲ್ಲಿ 20 ಸಾವಿರ ಜನರು ಸೇರಲಿದ್ದಾರೆಂಬ ಮಾಹಿತಿ ಇದೆ. ಡಿ.8ರಂದು ದತ್ತಪೀಠದಲ್ಲಿ ದತ್ತಪಾದುಕೆಗಳ ದರ್ಶನ ನಡೆಯಲಿದ್ದು, ಜಿಲ್ಲಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡಲು ಸೂಕ್ತ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ದತ್ತಜಯಂತಿ ಅಂಗವಾಗಿ ಪೊಲೀಸ್ ಬಂದೋಬಸ್ತ್ ವಿವಿಧ ಹಂತದ ಅಧಿಕಾರಿಗಳು ಸೇರಿದಂತೆ 3,500 ಮಂದಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಜಿಲ್ಲಾದ್ಯಂತ 24 ಚೆಕ್‍ ಪೋಸ್ಟ್ ಗಳನ್ನು ತೆರೆಯಲಾಗಿದೆ. 14 ಚೆಕ್‍ಪೋಸ್ಟ್‍ಗಳನ್ನು ಚಿಕ್ಕಮಗಳೂರು ಜಿಲ್ಲೆಯ ಗಡಿ ಪ್ರದೇಶದಲ್ಲಿ ತೆರೆಯಲಾಗಿದ್ದು, ನಗರ ಸೇರಿದಂತೆ ಇತರೆಡೆಗಳಲ್ಲಿ 5 ಚೆಕ್‍ಪೋಸ್ಟ್‍ಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಎರಡು ಸಮುದಾಯಗಳ ಮುಖಂಡರೊಂದಿಗೆ ಸಭೆ ನಡೆಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟರ್ ಹಾಕದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇತರ ಧರ್ಮೀಯರ ಭಾವನೆಗೆ ಧಕ್ಕೆಯಾಗುವಂತಹ ಘೋಷಣೆಗಳನ್ನು ಕೂಗದಂತೆ ಸೂಚನೆ ನೀಡಲಾಗಿದೆ ಎಂದರು.

Similar News