ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಿಂದ ಸರಕಾರಕ್ಕೆ ಆರ್ಥಿಕ ಹೊರೆಯಾಗಿಲ್ಲ: ಸಚಿವ ಪ್ರಭು ಚೌಹಾಣ್

Update: 2022-12-03 14:15 GMT

ಬೆಂಗಳೂರು, ಡಿ. 3: ‘ರಾಜ್ಯದಲ್ಲಿ ಜಾನುವಾರು ಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆ ಜಾರಿಯಲ್ಲಿದ್ದು, ಜಾನುವಾರುಗಳನ್ನು ಹತ್ಯೆ ಮಾಡಿದರೆ ಅವರು ಯಾರೇ ಆಗಿದ್ದರೂ ಜೈಲಿಗೆ ಕಳುಹಿಸುತ್ತೇವೆ’ ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಇಂದಿಲ್ಲಿ ವಿಪಕ್ಷ ನಾಯಕ ಸಿದ್ಧರಾಮಯ್ಯರಿಗೆ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ವಿಕಾಸಸೌಧದಲ್ಲಿನ ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 1964ರಲ್ಲೆ ಜಾನುವಾರು ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿತ್ತು. ಅಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕಾಯ್ದೆ ಜಾರಿ ಮಾಡಿದ್ದು, ಗೋಹತ್ಯೆಗೆ ದಂಡ ಮತ್ತು ಶಿಕ್ಷೆ ಕಡಿಮೆ ಇತ್ತು. ಇದೀಗ ಕಾಯ್ದೆ ಪರಿಣಾಮಕಾರಿ ಅನುಷ್ಠಾನಗೊಳಿಸಲು ಶಿಕ್ಷೆ ಮತ್ತು ದಂಡದ ಪ್ರಮಾಣ ಹೆಚ್ಚಿಸಲಾಗಿದೆ.

ಆರ್ಥಿಕ ಹೊರೆ ಆಗಿಲ್ಲ: ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಿಂದ ಸರಕಾರಕ್ಕೆ ಆರ್ಥಿಕ ಹೊರೆಯಾಗಿದೆ ಎಂಬುದು ಸತ್ಯಕ್ಕೆ ದೂರ. ಕಾಯ್ದೆ ಜಾರಿಯಿಂದ ಸರಕಾರಕ್ಕೆ ಯಾವುದೇ ರೀತಿಯ ನಷ್ಟವೂ ಆಗಿಲ್ಲ. ಆದರೆ, ರಾಜ್ಯದ ಜನರಿಗೆ ಕಾಂಗ್ರೆಸ್ ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಕ್ಕೆ ತಿರುಗೇಟು ನೀಡಿದರು.

‘ಗೋ ಶಾಲೆಗಳಿಗೆ ಮೇವು ಪೂರೈಕೆ ಮಾಡಲು ಕಮಿಷನ್ ನೀಡಬೇಕೆಂಬ ಆರೋಪದಲ್ಲಿಯೂ ಹುರುಳಿಲ್ಲ. ಈ ಬಗ್ಗೆ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ಕಾಂಗ್ರೆಸ್ ಪಕ್ಷ ನನ್ನ ಹೆಸರಿಗೆ ಕಳಂಕ ತರಲು ಪ್ರಯತ್ನ ನಡೆಸಿದೆ. ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಬೇಡ. ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಯಾವುದೇ ತನಿಖೆಗೆ ಸಿದ್ದ. ನಾನು ತಪ್ಪು ಮಾಡಿದ್ದರೆ ಈ ಕುರ್ಚಿಯಲ್ಲಿ ಒಂದು ಕ್ಷಣವೂ ಕೂರುವುದಿಲ್ಲ’ ಎಂದು ಪ್ರಭು ಚೌಹಾಣ್ ಇದೇ ವೇಳೆ ಸವಾಲು ಹಾಕಿದರು.

ರಾಜ್ಯದಲ್ಲಿ ಜಾನುವಾರು ಹತ್ಯೆ ನಿಷೇಧ ಕಾಯ್ದೆ ಪರಿಣಾಮಕಾರಿ ಜಾರಿಯಿಂದ ಗೋಹತ್ಯೆ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿವೆ. ಆದರೆ, ಕಾಂಗ್ರೆಸ್ ಪಕ್ಷ ಈ ವಿಚಾರದಲ್ಲಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಇಲಾಖೆಯಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ ಎಂದು ವಿವರಿಸಿದರು.

ಇದೇ ಮೊದಲ ಬಾರಿಗೆ 15 ಪಶು ಸಂಜೀವಿನಿ ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಆರೋಗ್ಯ ಸೇವೆಗೆ ಹೊಸ ಅಧ್ಯಾಯ ಬರೆದಿದ್ದನ್ನು ಮನಗಂಡ ಕೇಂದ್ರ ಸರಕಾರವು ಶೇ.100ರಷ್ಟು ಸಹಾಯಧನದಲ್ಲಿ 275 ಪಶು ಸಂಚಾರಿ ಚಿಕಿತ್ಸಾ ವಾಹನಗಳನ್ನು ನೀಡಿದೆ. ಈ ಯೋಜನೆಗೆ 44 ಕೋಟಿ ರೂ.ವೆಚ್ಚ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

‘ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧ ಕಾಯ್ದೆ ತೆಗೆದು ಹಾಕುತ್ತೇವೆಂಬ ಸಿದ್ಧರಾಮಯ್ಯನವರಿಗೆ ತಾಕತ್ತು ಇದ್ದರೆ ನನ್ನ ಮುಂದೆ ಗೋಮಾಂಸ ತಿನ್ನಲಿ. ಅವರನ್ನು ಒಳಗೆ ಹಾಕಿಸುತ್ತೇನೆ’

-ಪ್ರಭು ಚೌಹಾಣ್ ಪಶುಸಂಗೋಪನಾ ಸಚಿವ 

Similar News