ಮಂಡ್ಯ | 'ನಮಗೆ ನಂಬಿಕೆ ಹೊರಟುಹೋಗಿದೆ': ಸಚಿವರ ಮನವಿ ತಿರಸ್ಕರಿಸಿ ಧರಣಿ ಮುಂದುವರಿಸಿದ ರೈತರು

ಕಬ್ಬಿನ ದರ ಹೆಚ್ಚಳಕ್ಕೆ ಒತ್ತಾಯ

Update: 2022-12-03 14:46 GMT

ಮಂಡ್ಯ, ಡಿ.3: ಕಬ್ಬು, ಹಾಲು ದರ ಹೆಚ್ಚಳಕ್ಕೆ ಒತ್ತಾಯಿಸಿ 27 ದಿನದಿಂದ ನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ರೈತಸಂಘದ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರು, ಸಚಿವ ಕೆ.ಗೋಪಾಲಯ್ಯ ಮನವಿಯನ್ನು ತಿರಸ್ಕರಿಸಿ ಧರಣಿ ಮುಂದುವರಿಸಿದ್ದಾರೆ.

27 ದಿನದಿಂದ ಸ್ಥಳಕ್ಕೆ ಆಗಮಿಸಿ ಅಹವಾಲು ಕೇಳದ ಹಿನ್ನೆಲೆಯಲ್ಲಿ ರೈತರ ಆಕ್ರೋಶಕ್ಕೆ ಗುರಿಯಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ, ಶನಿವಾರ 27ನೇ ದಿನ ಆಗಮಿಸಿ ರೈತರ ಅಹವಾಲು ಸ್ವೀಕರಿಸಿ, ಅವರ ಜತೆಯಲ್ಲೇ ತಿಂಡಿ ತಿಂದು  ಹೋರಾಟಕ್ಕೆ ಬೆಂಬಲ ನೀಡಿದರು.

ಸಮಸ್ಯೆ ಬಗೆಹರಿಸಲು ಸಿಎಂ ತೀರ್ಮಾನಿಸಿದ್ದಾರೆ. ಆದರೆ, ದರ ಹೆಚ್ಚಳಕ್ಕೆ ಸಕ್ಕರೆ ಕಾರ್ಖಾನೆ ಮಾಲಕರು ತಡೆಯಾಜ್ಞೆ ತಂದಿದ್ದಾರೆ. ಹಾಗಾಗಿ ತಡವಾಗಿದೆ. ಸರಕಾರದ ಜತೆ ಮಾತನಾಡಿ ಬಗೆಹರಿಸುತ್ತೇನೆ. ದಯವಿಟ್ಟು ಧರಣಿ ಕೈಬಿಡಿ ಎಂದು ಗೋಪಾಲಯ್ಯ ರೈತರಿಗೆ ಮನವಿ ಮಾಡಿದರು. ಆದರೆ, ರೈತರು ಸಚಿವರ ಮನವಿಯನ್ನು ತಿರಸ್ಕರಿಸಿದರು. 'ಸರಕಾರದ ಭರವಸೆಗಳ ಬಗ್ಗೆ ನಮಗೆ ನಂಬಿಕೆ ಹೊರಟುಹೋಗಿದೆ. ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ನೀವೂ ಹೋರಾಟಕ್ಕೆ ಸಹಕರಿಸಿ' ಎಂದು ರೈತರು ಪಟ್ಟುಹಿಡಿದ ಹಿನ್ನೆಲೆಯಲ್ಲಿ, ಸಚಿವರು ಬಂದ ದಾರಿಗೆ ಸುಂಕವಿಲ್ಲದೆ ವಾಪಸ್ಸಾದರು.

ಅಕ್ಕಿಗಿರಣಿ ಮಾಲಕರ ಬೆಂಬಲ: ರೈತರ ಮುಂದುವರಿದ ಧರಣಿಗೆ ಶನಿವಾರ ಅಕ್ಕಿಗಿರಿಣಿ ಮಾಲಕರ ಸಂಘದ ಅಧ್ಯಕ್ಷ ರಮೇಶ್, ಮಹೇಶ್‍ಕುಮಾರ್, ಉದಯ್‍ಕುಮಾರ್, ಆತ್ಮಾನಂದ, ವೇಣುಗೋಪಾಲ್, ದೀಪಕ್, ಅರಣ್, ರಾಮಕೃಷ್ಣೇಗೌಡ, ಇತರರು ಬೆಂಬಲ ನೀಡಿದರು.

Similar News