'ಜೈ ಸಿಯಾ ರಾಮ್' ಕುರಿತು ಆರೆಸ್ಸೆಸ್, ಬಿಜೆಪಿಗೆ ಪಾಠ ಮಾಡಿದ ರಾಹುಲ್ ಗಾಂಧಿ!

Update: 2022-12-03 17:43 GMT

ಮಧ್ಯ ಪ್ರದೇಶ: ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ (Rahul Gandhi) ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಶುಕ್ರವಾರ ಬಿಜೆಪಿ (BJP) ಮತ್ತು ಆರೆಸ್ಸೆಸ್ (RSS) ಗೆ 'ಜೈ ಸಿಯಾರಾಮ್' ಹೇಳಲು ಸಲಹೆ ನೀಡಿದ ಅವರು ಜೈ ಶ್ರೀರಾಮ್ ಮತ್ತು ಜೈ ಸಿಯಾರಾಮ್ ನಡುವಿನ ವ್ಯತ್ಯಾಸವನ್ನು ಹೇಳಿದ್ದಾರೆ. 

ಮಧ್ಯಪ್ರದೇಶದಲ್ಲಿ ತಮ್ಮ ಭಾರತ್ ಜೋಡೋ ಯಾತ್ರೆ ನಡುವೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್‌ ಗಾಂಧಿ, 'ಜೈ ಶ್ರೀ ರಾಮ್', 'ಜೈ ಸಿಯಾರಾಮ್' ಮತ್ತು 'ಹೇ ರಾಮ್' ಘೋಷಣೆಗಳನ್ನು ತಮ್ಮದೇ ಶೈಲಿಯಲ್ಲಿ ವ್ಯಾಖ್ಯಾನಿಸಿದ್ದಾರೆ.

'ಜೈ ಸಿಯಾರಾಮ್' ಎಂದರೆ ಏನು? ಜೈ ಸೀತಾ ಮತ್ತು ಜೈ ರಾಮ್ ಎಂದರೆ ಸೀತೆ ಮತ್ತು ರಾಮ ಒಂದೇ. ಅದಕ್ಕಾಗಿಯೇ ಜೈ ಸಿಯಾರಾಮ್ ಅಥವಾ ಜೈ ಸೀತಾರಾಮ್ ಎಂಬ ಘೋಷಣೆ. ಭಗವಾನ್ ರಾಮನು ಸೀತೆಯ ಗೌರವಕ್ಕಾಗಿ ಹೋರಾಡಿದನು. ಆದರೆ ಬಿಜೆಪಿ, ಆರೆಸ್ಸೆಸ್ ಗೆ ಜೈ ಸಿಯಾರಾಮ್‌ ಬೇಡ. ಯಾಕೆಂದರೆ ಅವರಿಗೆ ಸೀತಾಮಾತೆ ಬೇಡ. ಅವರಲ್ಲಿ ಮಹಿಳೆಯರಿಗೆ ಸ್ಥಾನವಿಲ್ಲ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. 

“ಸಿಯಾರಾಮ್ ಮತ್ತು ಸೀತಾರಾಮ್ ಘೋಷಣೆ ಅವರು ಕೂಗುತ್ತಿಲ್ಲ, ಏಕೆಂದರೆ ಅವರ ಸಂಘಟನೆಯಲ್ಲಿ ಮಹಿಳೆ ಇಲ್ಲ, ಆದ್ದರಿಂದ ಇದು ಜೈ ಸಿಯಾರಾಮ್ ಸಂಘಟನೆಯಲ್ಲ, ಅವರ ಸಂಘಟನೆಯಲ್ಲಿ ಸೀತೆ ಬರುವುದಿಲ್ಲ ಎಂದು ಸೀತೆಯನ್ನು ಹೊರಹಾಕಿದ್ದಾರೆ.  ಆರೆಸ್ಸೆಸ್ ನವರಿಗೆ ಜೈ ಶ್ರೀರಾಮ್, ಜೈ ಸಿಯಾರಾಮ್ ಮತ್ತು ಹೇ ರಾಮ್ ಎಂದು ಹೇಳಲು ನಾನು ಬಯಸುತ್ತೇನೆ. ಸೀತೆಯನ್ನು ಅವಮಾನಿಸಬೇಡಿ” ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. 

ಗಾಂಧೀಜಿ ಹೇ ರಾಮ್ ಎನ್ನುತ್ತಿದ್ದರು. ಹೇ ರಾಮ್ ಎಂಬುದು ಗಾಂಧೀಜಿಯವರ ಘೋಷಣೆಯಾಗಿತ್ತು. ಹೇ ರಾಮ್ ಉಪನಾಮದ ಅರ್ಥವೇನು? ಹೇ ರಾಮ್ ಎಂದರೆ ರಾಮ ಒಂದು ಜೀವನ ವಿಧಾನ, ಭಗವಾನ್ ರಾಮ ಕೇವಲ ಒಬ್ಬ ವ್ಯಕ್ತಿಯಲ್ಲ, ಜೀವನ ವಿಧಾನ, ಪ್ರೀತಿ, ಸಹೋದರತ್ವ, ಗೌರವ, ತಪಸ್ಸು, ಅವನು ಇಡೀ ಜಗತ್ತಿಗೆ ಬದುಕುವ ಮಾರ್ಗವನ್ನು ಕಲಿಸಿದನು. ಭಗವಾನ್ ರಾಮನು ತನ್ನ ಜೀವನವನ್ನು ನಡೆಸಿದ ಸ್ಫೂರ್ತಿಯೊಂದಿಗೆ ಆರೆಸ್ಸೆಸ್ ಮತ್ತು ಬಿಜೆಪಿಗರು ತಮ್ಮ ಜೀವನವನ್ನು ನಡೆಸುವುದಿಲ್ಲ. ರಾಮ ಯಾರಿಗೂ ಅನ್ಯಾಯ ಮಾಡಿಲ್ಲ. ರಾಮ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಿದ. ರಾಮ ಎಲ್ಲರಿಗೂ ಗೌರವ ಕೊಟ್ಟ. ಆರೆಸ್ಸೆಸ್ ಮತ್ತು ಬಿಜೆಪಿಯ ಜನರು ಭಗವಾನ್ ರಾಮನ ಜೀವನ ವಿಧಾನವನ್ನು ಅನುಸರಿಸುವುದಿಲ್ಲ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.
 
ಗಾಂಧೀಜಿಯವರು ಹೇ ರಾಮ್ ಎಂದು ಹೇಳುತ್ತಿದ್ದರು ಎಂದರೆ ಶ್ರೀರಾಮ ಎಂಬ ಭಾವನೆ ನಮ್ಮ ಹೃದಯದಲ್ಲಿದೆ. ಮತ್ತು ನಾವು ಅದೇ ಭಾವನೆಯೊಂದಿಗೆ ಜೀವನವನ್ನು ನಡೆಸಬೇಕು ಎಂದು ಅವರು ಹೇಳಿದ್ದಾರೆ.

ಈ ನಡುವೆ ರಾಹುಲ್‌ ಗಾಂಧಿಯ ಹೇಳಿಕೆಗೆ ಬಿಜೆಪಿ ಪ್ರತ್ಯುತ್ತರ ನೀಡಿದ್ದು, ಬಿಜೆಪಿಗೆ ರಾಹುಲ್ ಗಾಂಧಿ ಸರ್ಟಿಫಿಕೇಟ್ ಅಗತ್ಯವಿಲ್ಲ ಎಂದು ಬಿಜೆಪಿ ನಾಯಕ ಶಾನವಾಝ್ ಹುಸೇನ್ ಹೇಳಿದ್ದಾರೆ. ಇದೇ ವೇಳೆ ರಾಹುಲ್ ಗಾಂಧಿ ನಾಟಕ ತಂಡದ ನಾಯಕ ಎಂದು ಬೃಜೇಶ್ ಪಾಠಕ್ ಹೇಳಿದ್ದಾರೆ. 

Similar News