ಇಂಧನ ಭದ್ರತೆಯ ಅಗತ್ಯ ಪೂರೈಸಲು ಕಲ್ಲಿದ್ದಲು ಉತ್ಪಾದನೆ ಹೆಚ್ಚಳ: ಪ್ರಹ್ಲಾದ್ ಜೋಶಿ

Update: 2022-12-03 17:42 GMT

ಬೆಂಗಳೂರು, ಡಿ.3: ಕಲ್ಲಿದ್ದಲು ಮತ್ತು ಗಣಿ ವಲಯಗಳಲ್ಲಿನ ಸರಕಾರದ ಸುಧಾರಣೆಗಳು, ವ್ಯವಹಾರ ಮಾಡುವುದನ್ನು ಸುಲಭಗೊಳಿಸಿರುವುದರಿಂದ ಸಂಭಾವ್ಯ ಹೂಡಿಕೆದಾರರನ್ನು ಆಕರ್ಷಿಸಿವೆ ಮತ್ತು 500 ಗಣಿಗಳನ್ನು ಹರಾಜು ಹಾಕುವ ಪ್ರಧಾನಿಯ ದೂರದೃಷ್ಟಿಯನ್ನು ಸಾಧಿಸಲು ಇಲಾಖೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು  ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. 

ಶನಿವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಆಯೋಜಿಸಲಾಗಿದ್ದ ವಾಣಿಜ್ಯ ಕಲ್ಲಿದ್ದಲು ಗಣಿಗಳ ಹರಾಜು ಕುರಿತ ಹೂಡಿಕೆದಾರರ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾರತವು ಕಲ್ಲಿದ್ದಲಿನ ಅತಿದೊಡ್ಡ ಸಂಗ್ರಹವನ್ನು ಹೊಂದಿದೆ ಮತ್ತು ಅತಿದೊಡ್ಡ ಉತ್ಪಾದಕ ಮತ್ತು ಆಮದುದಾರನಾಗಿದ್ದರೂ, ನಮ್ಮ ಹೆಚ್ಚುತ್ತಿರುವ ಇಂಧನ ಭದ್ರತೆ ಅಗತ್ಯಗಳನ್ನು ಪೂರೈಸಲು ದೇಶವು ಕಲ್ಲಿದ್ದಲು ಉತ್ಪಾದನೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದರು.

ದೇಶೀಯ ಕಲ್ಲಿದ್ದಲು ಉತ್ಪಾದನೆಯಲ್ಲಿ ಹೆಚ್ಚುತ್ತಿರುವ ಏರಿಕೆಯನ್ನು ವಿವರಿಸಿದ ಪ್ರಹ್ಲಾದ್ ಜೋಶಿ, ಈ ವರ್ಷ ದೇಶವು 900 ಮಿಲಿಯನ್ ಟನ್ (ಎಂಟಿ) ಕಲ್ಲಿದ್ದಲು ಉತ್ಪಾದಿಸಲು ಸಜ್ಜಾಗಿದೆ. ಮುಂದಿನ ವರ್ಷ ಉತ್ಪಾದನೆಯು 1000 ದಶಲಕ್ಷ ಟನ್‍ಗಳನ್ನು ಮುಟ್ಟುವ ಅಂದಾಜಿದೆ. ಪ್ರಸ್ತುತ ಕಲ್ಲಿದ್ದಲು ಮತ್ತು ಗಣಿ ವಲಯವು ಒಟ್ಟು ದೇಶೀಯ ಉತ್ಪನ್ನಕ್ಕೆ ಶೇಕಡಾ 0.9 ರಷ್ಟು ಕೊಡುಗೆ ನೀಡುತ್ತಿದೆ ಎಂದರು.

ಮುಂಬರುವ ವರ್ಷಗಳಲ್ಲಿ ಇದನ್ನು ಶೇ.2.5ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಹಲವಾರು ಗಣಿಗಳ ಸಮೃದ್ಧ ಭಂಡಾರವನ್ನು ಹೊಂದಿರುವ ಕರ್ನಾಟಕವು ಕಲ್ಲಿದ್ದಲು ಮತ್ತು ಗಣಿ ವಲಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೂಡಿಕೆದಾರರ ಸಮಾವೇಶವು ಕಲ್ಲಿದ್ದಲು ಗಣಿಗಳ ವಾಣಿಜ್ಯ ಹರಾಜಿನಲ್ಲಿ ಭಾಗವಹಿಸುವಿಕೆಯನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶ ಹೊಂದಿದೆ ಎಂದು ಅವರು ಹೇಳಿದರು.

ಸಮಾರಂಭದ ಮುಖ್ಯ ಅತಿಥಿಯಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದರು. ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್, ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿ ಅಮೃತ್ ಲಾಲ್ ಮೀನಾ, ಕಲ್ಲಿದ್ದಲು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮತ್ತು ನಾಮನಿರ್ದೇಶಿತ ಪ್ರಾಧಿಕಾರಿ ಎಂ.ನಾಗರಾಜು,  ಗಣಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸಂಜಯ್ ಲೋಹಿಯಾ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.

Similar News