ದಿಲ್ಲಿ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆ: ಮತಗಟ್ಟೆಗಾಗಿ ಗಂಟೆಗಟ್ಟಲೆ ಸುತ್ತಾಡಿ ಹತಾಶರಾದ ಮತದಾರರು!

Update: 2022-12-04 09:00 GMT

ಹೊಸದಿಲ್ಲಿ: ದಿಲ್ಲಿಯ ಮುನ್ಸಿಪಲ್ ಕಾರ್ಪೊರೇಶನ್‌ಗೆ (ಎಂಸಿಡಿ) ಚುನಾವಣೆಯ ನಿರ್ವಹಣೆಯಲ್ಲಿ ತೀವ್ರ ದುರುಪಯೋಗವಾಗಿದೆ ಎಂದು ಹತಾಶೆಗೊಂಡಿರುವ ಮತದಾರರು ಆರೋಪಿಸಿದ್ದಾರೆ.

ಪಶ್ಚಿಮ ಪಟೇಲ್ ನಗರದಲ್ಲಿರುವ ಮತಗಟ್ಟೆಯೊಂದರಲ್ಲಿ ಹಲವಾರು ಮತದಾರರು ತಾವು ಮತ ಚಲಾಯಿಸಬೇಕಾದ ಮತಗಟ್ಟೆಯನ್ನು ಹುಡುಕಲು ಗಂಟೆಗಟ್ಟಲೆ ಅಲೆದಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

"ನಾನು ನನ್ನ ಮಗುವಿನೊಂದಿಗೆ ಒಂದು ಗಂಟೆಗೂ ಹೆಚ್ಚು ಹೊತ್ತಿನಿಂದ  ಸುತ್ತಾಡುತ್ತಿದ್ದೇನೆ, ಆದರೆ ಇನ್ನೂ ಮತ ಚಲಾಯಿಸಲು ಬೂತ್ ಸಿಕ್ಕಿಲ್ಲ. ನನ್ನನ್ನು ಬೇರೆ ಬೇರೆ ಬೂತ್‌ಗಳಿಗೆ ಹೋಗಲು ಹೇಳಲಾಗುತ್ತಿದೆ. ನನ್ನ ಪತ್ನಿ ಮತದಾನ ಮಾಡಿದ್ದಾಳೆ, ಆದರೆ ನನಗೆ ಸಾಧ್ಯವಾಗಲಿಲ್ಲ. ಎಲ್ಲಿ ಮತದಾನ ಮಾಡಬೇಕೆಂದು ಯಾರಿಗೂ ತಿಳಿದಿಲ್ಲ" ಎನ್ನುತ್ತಾರೆ ಮತದಾರ ಕಾಲು ರಾಮ್.

ಇದೇ ಪರಿಸ್ಥಿತಿಯನ್ನು ಎದುರಿಸಿದ ಮತ್ತೊಬ್ಬ ಮಹಿಳೆ, ತಮ್ಮ ಕುಟುಂಬದ 20 ಕ್ಕೂ ಹೆಚ್ಚು ಸದಸ್ಯರು ಮತ ಚಲಾಯಿಸಲು ಬಂದಿದ್ದರು.  ಆದರೆ ಅವರಲ್ಲಿ ಹೆಚ್ಚಿನವರು ತಮ್ಮ ಬೂತ್ ಅನ್ನು ಪತ್ತೆಹಚ್ಚಲು ಸಾಧ್ಯವಾಗದೆ ಮನೆಗೆ ಹಿಂತಿರುಗಿದರು ಎಂದರು.

"ನಾವು ಎರಡು ಗಂಟೆಯಿಂದ ತಿರುಗಾಡುತ್ತಿದ್ದೇವೆ. ನಾವು ಅಲ್ಲಿ ಮತ ಚಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿ ನಮ್ಮನ್ನು ಬೇರೆ ಬೇರೆ ರೂಮ್ ಗಳಿಗೆ  ಕಳುಹಿಸಲಾಗುತ್ತಿದೆ. ನಮ್ಮ ಮತವನ್ನು ಹಾಕಲು ಸ್ಥಳ ಸಿಗದಿದ್ದರೆ ನಾವು ಹೇಗೆ ಮತ ಚಲಾಯಿಸುವುದು?" ಎಂದು ಮಹಿಳೆಯೊಬ್ಬರು ಹೇಳಿದ್ದಾರೆ.

ಈ ಹಿಂದೆ ಆ್ಯಪ್ ಚುನಾವಣೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ತೋರಿಸುತ್ತಿತ್ತು.  ಆದರೆ ಈಗ ಸ್ಲಿಪ್‌ಗಳಂತೆಯೇ ಅದು ಕೂಡ ತಪ್ಪು ಮಾಹಿತಿ ನೀಡುತ್ತಿದೆ ಎಂದು ಯುವ ಮತದಾರರೊಬ್ಬರು ಹೇಳುತ್ತಾರೆ.

ನಾವು ಕೂಡ ಮತಗಟ್ಟೆ ಪತ್ತೆ ಹಚ್ಚಲು ಯತ್ನಿಸಿದ್ದೇವೆ. ನಮಗೆ ವಯಸ್ಸಾಗಿದೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ನಡೆದಾಡಲು ನಮಗೆ ಸಾಧ್ಯವಾಗುತ್ತಿಲ್ಲ. ನಮ್ಮ ಮತ ಚಲಾಯಿಸದೆ ಮನೆಗೆ ವಾಪಸಾಗುತ್ತಿದ್ದೇವೆ ಎಂದು ಇಬ್ಬರು ಹಿರಿಯ ಮತದಾರರು ಹೇಳಿದ್ದಾರೆ.

Similar News