ಶಿರಾಳಕೊಪ್ಪ | ನಿಷೇಧಿತ PFI, CFI ಪರ ಗೋಡೆ ಬರಹ: ಪ್ರಕರಣ ದಾಖಲು

Update: 2022-12-04 07:12 GMT

ಶಿವಮೊಗ್ಗ, ಡಿ.4: ಶಿರಾಳಕೊಪ್ಪದಲ್ಲಿ ಕಿಡಿಗೇಡಿಗಳು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ(CFI) ಸಂಘಟನೆಗೆ ಸೇರಿಕೊಳ್ಳಿ ಎಂದು ಪಟ್ಟಣದ ನಾನಾ ಕಡೆಗಳಲ್ಲಿ ಗೋಡೆ ಬರಹ ಗೀಚಿರುವ ಘಟನೆ ನಡೆದಿದೆ.

ಪಟ್ಟಣದ 9ಕ್ಕೂ ಹೆಚ್ಚು ಕಡೆ ಗೋಡೆ ಬರಹಗಳನ್ನು ಪ್ರದರ್ಶಿಸಲಾಗಿದೆ. ಹಳೆ ಪೆಟ್ರೋಲ್ ಬಂಕ್ ಪಕ್ಕದಲ್ಲಿನ ಸಿಮೆಂಟ್ ಕಾಂಪೌಂಡ್ ಮೇಲೆ, ಬೋವಿ ಕಾಲನಿಗೆ ಹೋಗುವ ವಿದ್ಯುತ್ ಕಂಬದ ಮೇಲೆ, ದೊಡ್ಡ ಬ್ಯಾಣದಕೇರಿಗೆ ಹೋಗುವ ಕ್ರಾಸ್ ಬಳಿ ಗೋಡೆ ಮತ್ತು ವಿದ್ಯುತ್ ಕಂಬ, ಚಂದ್ರಪ್ಪ ಎಂಬುವರ ಮನೆಯ ಕ್ರಾಸ್ ನ ವಿದ್ಯುತ್ ಕಂಬದ ಮೇಲೆ 'ಜಾಯಿನ್ ಸಿಎಫ್ಐ, ಪಿಎಫ್ಐ' ಎಂದು ಬರೆಯಲಾಗಿದೆ.

ಬಿಲಾಲ್ ಎಂಬವರ ಮನೆಯ ಬಳಿ ಇರುವ ಗ್ಯಾರೇಜ್ ಗೋಡೆ, ದೊಡ್ಡ ಬ್ಯಾಣದ ಕೇರಿಯ ರಸ್ತೆಯಿಂದ ಮಠದ ಕೇರಿಯ ರಸ್ತೆಯ ಬಾಜುವಿನ ಗೋಡೆ ಮೇಲೆ, ಫಾರೂಕ್ ಮತ್ತು ಬಿಲಾಲ್ ಮನೆಯ ಗೋಡೆಗಳ ಮೇಲೂ ಇದೇರೀತಿಯ ಬರಹಗಳು ಕಂಡುಬಂದಿವೆ.

ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಈ ಕೃತ್ಯ  ಬೆಳಕಿಗೆ ಬಂದಿದೆ. ಈ ಬರಹಗಳನ್ನು ಪೊಲೀಸರು ಅಳಿಸಿ ಹಾಕಿದ್ದಾರೆ.

ಈ ಬಗ್ಗೆ ಶಿರಾಳಕೊಪ್ಪ ಠಾಣೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Similar News