ಆನೇಕಲ್: ನಾಪತ್ತೆಯಾಗಿದ್ದ ವೃದ್ಧೆಯ ಮೃತದೇಹ ನೆರೆಮನೆಯ ಬೀರುವಿನಲ್ಲಿ ಪತ್ತೆ

Update: 2022-12-04 09:18 GMT

ಬೆಂಗಳೂರು(ಆನೇಕಲ್), ಡಿ.4: ಮೂರು ದಿನಗಳಿಂದ ನಾಪತ್ತೆಯಾಗಿದ್ದ ಎಂಬತ್ತು ವರ್ಷದ ಮಹಿಳೆಯೊಬ್ಬರ ಮೃತದೇಹ ಪಕ್ಕದ ಮನೆಯ ಬಟ್ಟೆ ಬೀರುವಿನಲ್ಲಿ ಕೊಲೆ(Murder)ಯಾಗಿರುವ ಸ್ಥಿತಿಯಲ್ಲಿಂದು ಪತ್ತೆಯಾದ ಘಟನೆ ನೆರಳೂರಿನಿಂದ ವರದಿಯಾಗಿದೆ.

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಹುಲಿಕುಂಟೆಯ ಮೂಸಗೊಲ್ಲಹಟ್ಟಿ ಹಳ್ಳಿಯ ವಾಸಿ ಪಾರ್ವತಮ್ಮ(80) ಕೊಲೆಯಾದವರು. ಆನೇಕಲ್ ತಾಲೂಕಿನ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ನೆರಳೂರು ಮೊದಲ ಅಡ್ಡರಸ್ತೆಯ ಅಂಬರೀಶ್ ರ ಬಾಡಿಗೆ ಮನೆಯ 2ನೇ ಮಹಡಿಯಲ್ಲಿರುವ ಪುತ್ರ ರಮೇಶ್ ಮನೆಯಲ್ಲಿ ಇವರು ವಾಸವಿದ್ದರು. ಅವರ ಮೃತದೇಹ ಅದೇ ಬಾಡಿಗೆ ಮನೆಯ 3ನೇ ಮಹಡಿಯಲ್ಲಿರುವ ಮನೆಯ ಕೋಣೆಯೊಂದರ ಬಟ್ಟೆ ಬೀರುವಿನಲ್ಲಿ ಬಟ್ಟೆಯಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿ ಕಂಡುಬಂದಿದೆ. ಅವರು ಧರಿಸಿದ್ದ ಚಿನ್ನಾಭರಣಗಳು ನಾಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ನಡುವೆ 3ನೇ ಮಹಡಿ ಮನೆಯಲ್ಲಿ ವಾಸ್ತವ್ಯವಿದ್ದ ಪಾಯಲ್ ಖಾನ್ ಎಂಬಾಕೆ ಕಾಣೆಯಾಗಿದ್ದು, ಆಕೆ ಪಾರ್ವತಮ್ಮರನ್ನು ಕೊಲೆಗೈದು ಚಿನ್ನಾಭರಣದ ಜೊತೆ ಪರಾರಿಯಾಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಘಟನೆ ವಿವರ: ಮೂರು ದಿನಗಳ ಹಿಂದೆ ಪಾರ್ವತಮ್ಮ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಅವರಿಗಾಗಿ ಮನೆಮಂದಿ ಎಲ್ಲ ಹುಡುಕಾಟ ನಡೆಸಿದ್ದರು. ಈ ವೇಳೆ ಅದೇ ಕಟ್ಟಡದ 3ನೇ ಮಹಡಿ ಮನೆಯಲ್ಲಿ ವಾಸ್ತವ್ಯವಿದ್ದ ಪಾರುಖ್ ಖಾನ್ ಕೂಡಾ ಹುಡುಕಾಟದಲ್ಲಿ ಶ್ರಮ ವಹಿಸಿ ಓಡಾಡಿದ್ದಳು. ಬಳಿಕ ಪಾರ್ವತಮ್ಮರ ಪುತ್ರ ಅತ್ತಿಬೆಲೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.  ದೂರು ದಾಖಲಾಗುತ್ತಿದ್ದಂತೆ ಪಾಯಲ್ ನಾಪತ್ತೆಯಾಗಿದ್ದಳೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶಂಕೆಗೊಂಡ ಅತ್ತಿಬೆಲೆ ಪೊಲೀಸ್ ಇನ್ ಸ್ಪೆಕ್ಟರ್ ಕೆ.ವಿಶ್ವನಾಥ್ ಅವರು ಪಾಯಲ್ ವಾಸವಿದ್ದ ಮನೆಯನ್ನು ಪರಿಶೀಲಿಸಿದಾಗ ಪಾರ್ವತಮ್ಮರ ಮೃತದೇಹ ಕೋಣೆಯೊಂದರ ವಾರ್ಡ್ರೋಬ್ ನಲ್ಲಿ ಬಟ್ಟೆಯಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪಾರ್ವತಮ್ಮರ ಕತ್ತಿನಲ್ಲಿದ್ದ ಮಾಂಗಲ್ಯ ಸರ, ಕಿವಿಯೋಲೆ, ಮಾಟಿ, ಮೂಗು ನತ್ತು, ಒಂದು ಉಂಗುರ ನಾಪತ್ತೆಯಾಗಿತ್ತು.

ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Similar News