ಅನಾಥ ಮಕ್ಕಳ ಮೇಲೆ ದೌರ್ಜನ್ಯ ಆರೋಪ: ಬಿಹಾರ, ತ.ನಾ.ಸರಕಾರಗಳಿಗೆ ಎನ್‌ಎಚ್‌ಆರ್‌ಸಿ ನೋಟಿಸ್

Update: 2022-12-04 14:56 GMT

ಹೊಸದಿಲ್ಲಿ,ಡಿ.4: ತಮಿಳುನಾಡಿನ ಮದ್ರಸಾವೊಂದರಲ್ಲಿ 12 ಅನಾಥ ಮಕ್ಕಳ ಮೇಲೆ ದೌರ್ಜನ್ಯ ನಡೆದಿದೆಯೆಂದು ಆರೋಪಿಸಲಾದ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಮಾನವಹಕ್ಕು ಆಯೋಗವು ಬಿಹಾರ ಹಾಗೂ ತಮಿಳುನಾಡು ಸರಕಾರಗಳಿಗೆ ಶನಿವಾರ ನೋಟಿಸ್ ಜಾರಿಗೊಳಿಸಿದೆ.

ಬಿಹಾರದ ಅನಾಥ ಮಕ್ಕಳನ್ನು ಕೂಡಿಹಾಕಿ, ಅವರ ಮೇಲೆ ದೌರ್ಜನ್ಯ ಎಸಗಿದದ ಆರೋಪಕ್ಕೆ ಸಂಬಂಧಿಸಿ ಚೆನ್ನೈನಲ್ಲಿ ಇಬ್ಬರನ್ನು ಬಂಧಿಸಲಾಗಿದೆಯೆಂಬ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯನ್ನು ಆಧರಿಸಿ ಆಯೋಗವು ಸ್ವಯಂಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿಕೊಂಡಿದೆ.

ಚೆನ್ನೈ ಸಮೀಪದ ಪೊನ್ನೈಅಮ್ಮನ್‌ಮೇಡುನಲ್ಲಿರುವ ಮದ್ರಸಾದಿಂದ 12 ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆಯೆಂದು ಎನ್‌ಎಚ್‌ಆರ್‌ಸಿ ತಿಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿ ಆಯೋಗವು ತಮಿಳುನಾಡು ಹಾಗೂ ಬಿಹಾರದ ಮುಖ್ಯ ಕಾರ್ಯದರ್ಶಿಗಳಿಗೆ ನೋಟಿಸ್‌ಗಳನ್ನು ಜಾರಿಗೊಳಿಸಿದೆ ಹಾಗೂ ನಾಲ್ಕು ವಾರಗಳೊಳಗೆ ಪ್ರಕರಣಕ್ಕೆ ಸಂಬಂಧಿಸಿ ವಿಸ್ತೃತ ವರದಿಯನ್ನು ಸಲ್ಲಿಸುವಂತೆ ಚೆನ್ನೈ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

 ಚೆನ್ನೈನ ಮಾಧವರಂ ಸಮೀಪದ ಪೊನ್ನೈಅಮ್ಮನ್‌ಮೇಡುವಿನ ಮದ್ರಸಾವೊದರಲ್ಲಿ ಕೆಲವು ಮಕ್ಕಳಿಗೆ ಕಿರುಕುಳ ನೀಡಲಾಗುತ್ತಿದೆ ಹಾಗೂ ದೈಹಿಕವಾಗಿ ದಂಡಿಸಲಾಗುತ್ತಿದೆ ಎಂದು 1098 ಸಹಾಯವಾಣಿಯ ಮೂಲಕ ಪೊಲೀಸರಿಗೆ ದೂರು ಬಂದಿರುವುದಾಗಿ ಡಿಸೆಂಬರ್ 1ರಂದು ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು.

  ಆರೋಪಿಗಳನ್ನು ಬಿಹಾರದವರೆಂದು ಗುರುತಿಸಲಾಗಿದ್ದು, ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆಯೆಂದು ವರದಿಯಲ್ಲಿ ತಿಳಿಸಲಾಗಿತ್ತು.

 ಆನಂತರ ಶಿಶು ಕಲ್ಯಾಣಾಧಿಕಾರಿಗಳ ಉಪಸ್ಥಿತಿಯಲ್ಲಿ ಸಂತ್ರಸ್ತ ಮಕ್ಕಳನ್ನು ಪೋಲೀಸರು ಸರಕಾರಿ ಮಕ್ಕಳ ಆಸ್ಪತ್ರೆಗೆ ಕೊಂಡೊಯ್ದು ವೈದ್ಯಕೀಯ ತಪಾಸಣೆ ನಡೆಸಿದರು 

Similar News