ವಿಧಾನಸಭೆ ಚುನಾವಣೆ: ಪಾವಗಡ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಘೋಷಿಸಿದ ಎಚ್.ಡಿ.ಕುಮಾರಸ್ವಾಮಿ

Update: 2022-12-04 15:01 GMT

ಪಾವಗಡ, ಡಿ.4 : ರಾಜ್ಯದಲ್ಲಿ 2023ಕ್ಕೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಪಾವಗಡ ತಾಲೂಕು ಸಮಗ್ರ ಅಭಿವೃದ್ಧಿಗೆ ಹಾಗೂ ಆರ್ಥಿಕವಾಗಿ ಸದೃಢವಾಗಲು ಶ್ರಮಿಸುತ್ತೇವೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ಪಾವಗಡ ಪಟ್ಟಣದ ಮುಖಂಡ ತಿಮ್ಮಾರಾಜು ರವರ ಮನೆಯಲ್ಲಿ ಮಧ್ಯಾಹ್ನದ ಊಟ ಸೇವಿಸಿ ನಂತರ ತುಮಕೂರು ರಸ್ತೆಯಲ್ಲಿರುವ ಕನಕದಾಸರ ಪ್ರತಿಮೆಗೆ 42 ಅಡಿವುಳ್ಳ ಬೃಹತ್ ಆಕಾರದ ಕಂಬಳಿ ಹಾರ ಹಾಕಿ ನಂತರ ಶನೇಶ್ವರ ಸರ್ಕಲ್ ಬಳಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು,  'ಈ ಭಾಗದಲ್ಲಿ ಜೆಡಿಎಸ್ ಅಭ್ಯರ್ಥಿ ಕೆ.ಎಂ. ತಿಮ್ಮರಾಯಪ್ಪ ಅವರನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ರಚಿಸಲು ನಿಮ್ಮೆಲ್ಲರ ಆಶೀರ್ವಾದ ಮುಖ್ಯ' ಎಂದು ತಿಳಿಸಿದರು.

ಈ ಭಾಗದಲ್ಲಿ ಹದಿನೈದು ಸಾವಿರ ಕುಟುಂಬಗಳಿಗೆ 82ಕೋಟಿ ಸಾಲ ಮನ್ನಾ ಮಾಡಲಾಗಿದೆ. 15 ಸಾವಿರ ಕುಟುಂಬದ ಸದಸ್ಯರು ಅರವತ್ತು ಸಾವಿರ ಅಗುತ್ತಾರೆ ಅವರು ಮತ ಹಾಕಿದರೆ ಸಾಕು ಈ ಭಾಗದಲ್ಲಿ  ಜೆಡಿಎಸ್ ಅಭ್ಯರ್ಥಿ ಗೆಲ್ಲುವುದು ಸಾದ್ಯ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವ ನಿರೀಕ್ಷೆಯಿದ್ದು ಸಂಪೂರ್ಣ ಸರ್ಕಾರ ರಚನೆಯಾದ 24 ಗಂಟೆಯಲ್ಲಿ ಸ್ತ್ರೀ ಶಕ್ತಿ ಸಂಘಗಳ ಸಂಪೂರ್ಣ ಸಾಲವನ್ನು ಮನ್ನಾ ಮಾಡಿ ಹೆಣ್ಣುಮಕ್ಕಳನ್ನು ಋಣಮುಕ್ತರನ್ನಾಗಿ ಮಾಡಲಾಗುವುದೆಂದು ಕುಮಾರಸ್ವಾಮಿ ಘೋಷಿಸಿದರು.

ಪಂಚರತ್ನ ಯೋಜನೆಯ ಮೂಲಕ ಎಲ್ಲರಿಗೂ 50 ಲಕ್ಷದವರೆಗೂ ಉಚಿತ ಆರೋಗ್ಯ ರಕ್ಷೆ, ಮಕ್ಕಳಿಗೆ 1 ರಿಂದ 12 ತರಗತಿಯವರೆಗೂ ಉಚಿತ ಶಿಕ್ಷಣ, ಯುವ ಜನತೆಗೆ ಉದ್ಯೋಗ, ಪ್ರತಿ ಕುಟುಂಬಕ್ಕೂ 10 ಲಕ್ಷದ ಮನೆ, ಹಾಗೂ ಪ್ರತಿ ಗ್ರಾ.ಪಂ.ಮಟ್ಟದಲ್ಲಿ 24/7 ಸುಸಜ್ಜಿತ ಆಸ್ಪತ್ರೆಯನ್ನು ಆರಂಭಿಸುವ ಯೋಜನೆಯನ್ನು ಹಾಕಿಕೊಂಡಿದೆ. ಈ ಬಗ್ಗೆ ಸರಕಾರಕ್ಕೆ ಚಾಟಿ ಬೀಸುತ್ತೇನೆ ಎಂದರು. ಈ ಬಾರಿ ಧರ್ಮ ಜಾತಿಬಿಟ್ಟು ಈ ನಿಮ್ಮ ಮನೆ ಮಗನಿಗೆ ಈ ಯೋಜನೆಗಳ ಜಾರಿಗೆ ನನಗೆ ಆಶೀರ್ವಾದವನ್ನು ಮಾಡಿ ಎಂದರು.

ಹೆಣ್ಣುಮಕ್ಕಳನ್ನು ಋಣಮುಕ್ತ ಮಾಡ್ತೀನಿ :

ಡಿಸಿಸಿ ಬ್ಯಾಂಕಿನಲ್ಲಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಸಾಲವಿದ್ದು ಬ್ಯಾಂಕನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಏನಾದರೂ ಸರಿ ಈ ಸಾಲವನ್ನೂ ಸಹ ನಮ್ಮ ಸರ್ಕಾರ ರಚನೆಯಾದ 24 ಗಂಟೆಯಲ್ಲಿ ಸಂಪೂರ್ಣ ಸಾಲಮನ್ನಾ ಮಾಡಿ ಈ ನಾಡಿನ ಹೆಣ್ಣುಮಕ್ಕಳನ್ನು ಋಣಮುಕ್ತರಾಗಿ ಮಾಡ್ತೀನಿ. ಜೊತೆಗೆ 65 ವರ್ಷ ತುಂಬಿದ ವೃದ್ಧರಿಗೆ 5 ಸಾವಿರ ಮಾಶಾಸನ ನೀಡಿ ಗೌರವ ನೀಡಲಾಗುವುದು ಎಂದರು.

ಈ ವೇಳೆ ಮಾಜಿ ಶಾಸಕ ಕೆ.ಎಂ.ತಿಮ್ಮಾರಾಯಪ್ಪ. ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಅಂಜಿನಪ್ಪ. ಸೊಗಡು ವೆಂಕಟೇಶ್. ತಿಮ್ಮರೆಡ್ಡಿ. ವೈ ಎನ್.ಎಚ್. ಹೋಬಳಿ ಅಧ್ಯಕ್ಷ ಸತ್ಯ ನಾರಾಯಣ. ಲೆಫ್ಟ್ ನಾಗರಾಜ. ರಾಮಚಂದ್ರಪ್ಪ. ಗ್ರಾಪಂ ಅಧ್ಯಕ್ಷ ಹನುಮಕ್ಕ. ಮುಖಂಡರುಗಳಾದ . . ನಾಗಲಾಪುರ ರೆಡ್ಡಿ ಮಂಜುನಾಥ.ಲೆಜೆಂಡ್ ವೆಂಕಟೇಶ್.ಓಬಳೇಶ್. ಸೇರಿದಂತೆ  ಸಾವಿರಾರು ಜನ ನಾಗಲಾಪುರ   ಹಾಗೂ ತಾಲೂಕಿನ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದರು.

Similar News