ಶಾಲಾ ಮಕ್ಕಳಿಗೆ ಖಾಸಗಿ ಸಹಭಾಗಿತ್ವದಲ್ಲಿ ಬಸ್ ಸೌಲಭ್ಯ: ಮುಖ್ಯಮಂತ್ರಿ ಬೊಮ್ಮಾಯಿ

Update: 2022-12-04 16:45 GMT

ಬೆಂಗಳೂರು, ಡಿ. 4: ಶಾಲಾ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸುವ ಪ್ರಾಯೋಗಿಕ (ಪೈಲಟ್) ಯೋಜನೆ ಶಿಗ್ಗಾಂವ್ ವಿಧಾನಸಭಾ ಕ್ಷೇತ್ರದಲ್ಲಿ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ರವಿವಾರ ವಾಯುವ್ಯ ಸಾರಿಗೆ ಸಂಸ್ಥೆ ಹಾವೇರಿ ವಿಭಾಗದ ಶಿಗ್ಗಾಂವ್ ನೂತನ ಬಸ್ ಘಟಕ ಮತ್ತು ಚಾಲನಾ-ತಾಂತ್ರಿಕ ತರಬೇತಿ ಕೇಂದ್ರದ ಶಂಕುಸ್ಥಾಪನಾ ಕಾರ್ಯವನ್ನು ನೆರವೇರಿಸಿ ಮಾತನಾಡಿದ ಅವರು, ಶಾಲಾ ಮಕ್ಕಳಿಗೆ ಖಾಸಗಿ ಸಹಭಾಗಿತ್ವದಲ್ಲಿ ಬಸ್ ವ್ಯವಸ್ಥೆ ಕಲ್ಪಿಸುವ ಈ ಯೋಜನೆಯನ್ನು ರಾಜ್ಯಾದ್ಯಂತ ಪ್ರಾರಂಭಿಸುವ ಗುರಿ ಇದ್ದು ನನ್ನ ಕ್ಷೇತ್ರದಿಂದಲೇ ಇದನ್ನು ಪ್ರಾರಂಭಿಸಬೇಕೆಂಬ ಉದ್ದೇಶ ಇದೆ ಎಂದು ನುಡಿದರು.

ತಾಲೂಕಿನಲ್ಲಿ ಶೀಘ್ರದಲ್ಲಿ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಪ್ರಾರಂಭವಾಗುತ್ತದೆ. ಬೇರೆ ಬೇರೆ ತಂತ್ರಜ್ಞಾನದಲ್ಲಿ ಆಧುನಿಕ ತರಬೇತಿ ಕೇಂದ್ರಕ್ಕೆ ಮುಂದಿನ ತಿಂಗಳು ಅದಕ್ಕೆ ಅಡಿಗಲ್ಲು ಹಾಕಲಿದ್ದೇನೆ. ಈ ಮೂಲಕ ತಾಲೂಕಿನಲ್ಲಿ ದೊಡ್ಡ ಪ್ರಮಾಣದಲ್ಲಿ ಕೌಶಲ್ಯ ಅಭಿವೃದ್ಧಿ ಮಾಡುವ ಇಚ್ಛೆ ನನ್ನದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಬಸ್ ಡಿಪೋ ಆಗಬೇಕೆಂದು 10 ವರ್ಷದಿಂದ ಬೇಡಿಕೆ ಇತ್ತು. ಇದಕ್ಕಾಗಿ ಮೀಸಲಿಟ್ಟಿದ್ದ ಜಾಗಕ್ಕೂ ಸಮಸ್ಯೆ ಆಗಿತ್ತು. ಅದನ್ನೆಲ್ಲವನ್ನೂ ನಿವಾರಿಸಿ 28 ಕೋಟಿ ರೂ.ವೆಚ್ಚದಲ್ಲಿ ಡಿಪೋ ಮತ್ತು ತರಬೇತಿ ಕೇಂದ್ರವನ್ನು ಪ್ರಾರಂಭ ಮಾಡುತ್ತಿದ್ದೀವಿ. ಶಿಗ್ಗಾಂವ್ ಸುತ್ತಮುತ್ತ ಅಭಿವೃದ್ಧಿ ಆಗುತ್ತಿರುವುದರಿಂದ ಸಾರಿಗೆ ವ್ಯವಸ್ಥೆ ಸುಗಮವಾಗಿ ಆಗಲು ಇಲ್ಲಿ ಡಿಪೋ ಆಗುವುದು ಅವಶ್ಯಕವಾಗಿತ್ತು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಜೆಸಿಬಿ ಸಂಸ್ಥೆಯ ತರಬೇತಿ ಕೇಂದ್ರವನ್ನು ಶಿಗ್ಗಾಂವ್‍ಗೆ ತರುವ ಪ್ರಯತ್ನ ಆಗುತ್ತಿದೆ. ಅದು ಬಂದರೆ ಯುವಕರು ಜೆಸಿಬಿ ವಾಹನ ಚಾಲಕ ತರಬೇತಿ ಪಡೆಯಬಹುದು. ಇದರ ಜತೆಯಲ್ಲಿ ಶಿಗ್ಗಾಂವ್‍ಗೆ ಆಟೊಮೊಬೈಲ್ ಉದ್ಯಮಗಳನ್ನು ತರಲು ಮಾತುಕತೆ ನಡೆಯುತ್ತಿದೆ. ಶೀಘ್ರದಲ್ಲಿ 350 ಎಂಪಿಎಲ್‍ಡಿ ಸಾಮಥ್ರ್ಯದ ಬಹುದೊಡ್ಡ ಎಥನಾಲ್ ಉತ್ಪಾದನಾ ಘಟಕ ಪ್ರಾರಂಭವಾಗುತ್ತಿದೆ. ಇದರಿಂದ ರೈತರಿಗೆ ದೊಡ್ಡ ಅನುಕೂಲ ಆಗುತ್ತದೆ. ಟೆಕ್ಸ್‍ಟೈಲ್ ಪಾರ್ಕ್ ಪ್ರಾರಂಭಿಸುವುದರ ಮೂಲಕ 5ಸಾವಿರ ಹೆಣ್ಣುಮಕ್ಕಳಿಗೆ ಕೆಲಸ ಸಿಗಲಿದೆ ಎಂದು ಅವರು ನುಡಿದರು.

ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್, ಪರಿಷತ್ ಸದಸ್ಯ ಸಂಕನೂರ, ವಾಯುವ್ಯ ಸಾರಿಗೆ ಸಂಸ್ಥೆ ಉಪಾಧ್ಯಕ್ಷ ಬಸವರಾಜ ಕೆಲಗಾರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Similar News