ನಮ್ಮ ಮಕ್ಕಳನ್ನು ಮಾನವರನ್ನಾಗಿಸುವ ಶಿಕ್ಷಣ ನೀಡಿ ಎಂದು ಹೆತ್ತವರು ಅಂಗಲಾಚುವ ಕಾಲ ಬರಲಿದೆ: ಸಯ್ಯದ್ ಮುಹಮ್ಮದ್ ಬ್ಯಾರಿ

Update: 2022-12-04 16:27 GMT

ಬೀದರ್, ಡಿ.4: ''ಜಗತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ಉತ್ತುಂಗ ಸ್ಥಿತಿ ತಲುಪಲಿದೆ. ಇದರ ಪ್ರಭಾವದಲ್ಲಿ ಭವಿಷ್ಯದ ಪೀಳಿಗೆ ಪರಿತಪಿಸಲಿದ್ದು, ಮನುಷ್ಯ ಯಾಂತ್ರೀಕೃತ ಆಗಲಿದ್ದಾನೆ. ಭಾವನೆಗಳು ಮತ್ತು ವೇದನೆಗಳಿಗೆ ಮಹತ್ವ ಇಲ್ಲದಾಗಲೂ ಬಹುದು. ಆ ಸಂದರ್ಭದಲ್ಲಿ  ಹೆತ್ತವರು  ನಮ್ಮ ಮಗ ಅಥವಾ ಮಗಳನ್ನು ಮಾನವರನ್ನಾಗಿಸುವ ಶಿಕ್ಷಣ ಎಲ್ಲಿದೆ ಎಂದು ಹುಡುಕಾಡುವರು. ಶಿಕ್ಷಣ ಸಂಸ್ಥೆಗಳಲ್ಲಿ ಬಂದು ನಮ್ಮ ಮಕ್ಕಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಿ ಅಷ್ಟು ಸಾಕು ಎಂದು ಅಂಗಲಾಚುವರು'' ಎಂದು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಬ್ಯಾರಿ ಅಭಿಪ್ರಾಯಪಟ್ಟರು.

ಅವರು ರವಿವಾರ ಬೀದರ್ ನ ಶಾಹೀನ್ ಆಯೋಜಿಸಿರುವ 'ಆಲ್ ಇಂಡಿಯಾ ಎಜುಕೇಟರ್ ಸಮ್ಮಿಟ್-2022' ಅನ್ನು ಉದ್ಘಾಟಿಸಿ, ದೇಶದ ಪ್ರಮುಖ ಭಾಗದಿಂದ ಬಂದ ಶಿಕ್ಷಣ ತಜ್ಞರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಮಕ್ಕಳ ಭವಿಷ್ಯದ ಆತಂಕವನ್ನು ರುಜುವಾತುಗೊಳಿಸುವ ಘಟನೆಗಳು ನಮ್ಮ ಸುತ್ತಲೂ ನಡೆಯುತ್ತಿದೆ. ಬೆಂಗಳೂರಿನ ಶಿಕ್ಷಣ ಸಂಸ್ಥೆಗಳಲ್ಲಿ ಪ್ರೌಢ ಶಾಲೆಯ ಮಕ್ಕಳ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ಪ್ರೆಗ್ನೆನ್ಸಿ ಮಾತ್ರೆಗಳು, ಲೈಂಗಿಕ ಬಳಕೆಯ ವಸ್ತುಗಳು, ಬಾಟಲ್ ಗಳು ಸಿಕ್ಕಿರುವ ಬಗ್ಗೆ ವರದಿಯಾಗಿತ್ತು. ನಮ್ಮ ಮುಂದಿನ ತಲೆಮಾರಿನ ಸ್ಥಿತಿಯ ಕುರಿತು ಊಹಿಸಿ ನೋಡಿ,  ನಾವು ಮಕ್ಕಳಲ್ಲಿ ಬದುಕಿನ ಮಹತ್ವ ಮತ್ತು ಉದ್ದೇಶ ತಿಳಿಸಬೇಕು. ಅವರಲ್ಲಿ ಸತ್ಯ, ಪ್ರಾಮಾಣಿಕತನ ಮತ್ತು ದೇವರ ಭಯ ಬೆಳೆಸಬೇಕು ಎಂದು ಸಲಹೆ ನೀಡಿದರು. 

''ದೀನ್ ದಾರ್ ಮತ್ತು ದುನಿಯಾದಾರ್ ಎಂಬ ಗುರುತಿಸುವಿಕೆ ಅಥವಾ ವಿಶ್ವಾಸದಿಂದ ನಮ್ಮಲ್ಲಿ ಪರಸ್ಪರ ಅಂತರ ಹೆಚ್ಚಾಗಿದೆ. ವಸ್ತ್ರಗಳಿಂದ, ಸಂಪತ್ತಿನಿಂದ, ಜ್ಞಾನದಿಂದ ದೀನ್ ದಾರ್ ಮತ್ತು ದುನಿಯಾದಾರ್ ನನ್ನು ಗುರುತಿಸಲಾಗುತ್ತಿದೆ. ವಾಸ್ತವದಲ್ಲಿ ದುನಿಯಾ ಸೃಷ್ಟಿಸಲ್ಪಟ್ಟಿದ್ದೇ ಬದುಕಲಿಕ್ಕೆ. ಹೇಗೆ ಬದುಕಬೇಕು ಎಂಬುವುದನ್ನು ಇಬ್ಬರೂ ಸಮಾನವಾಗಿ ಕಲಿಯಬೇಕು. ಆತ್ಮಕ್ಕೆ ಈಮಾನ್ ಎಷ್ಟು ಮಹತ್ವವೋ ದೇಹಕ್ಕೆ ಹಲಾಲ್ ಸಂಪತ್ತು ಅಷ್ಟೇ ಮುಖ್ಯ'' ಎಂದು ಅವರು ತಿಳಿಸಿದರು.

''ನಮ್ಮ ಮಸೀದಿಗಳನ್ನು ನಾವು ಉಪದೇಶಗಳಿಗೆ ಹೆಚ್ಚು ಸಕ್ರಿಯಗೊಳಿಸಬೇಕು. ಮಕ್ಕಳ ಪಾಲನೆ, ಹೆತ್ತವರ ಜವಾಬ್ದಾರಿ, ಸಮಾಜದಲ್ಲಿ ಬದುಕುವ ರೀತಿ, ಶಿಕ್ಷಣ ಶಿಸ್ತು ,ಭವಿಷ್ಯದ ಸವಾಲು ಮತ್ತು ದೈನಂದಿನ ಚಟುವಟಿಕೆಯನ್ನು ಸಮೂಹಕ್ಕೆ ನಿರಂತರ ಉಪದೇಶ ಮಾಡಬೇಕು. ಮದರಸ ಶಿಕ್ಷಣದ ಉನ್ನತೀಕರಣ ಮಾಡಬೇಕು. ಮದರಸವು ಸಮನ್ವಯ ಶಿಕ್ಷಣ ಕೇಂದ್ರಗಳಾಗಬೇಕು. ಬ್ರಿಟೀಷರ ಷಡ್ಯಂತ್ರದಿಂದ ನಾವು ದೀನ್ ಮತ್ತು ದುನಿಯಾ ಎರಡು ವಿಭಾಗ ಮಾಡಿದೆವು. ವಾಸ್ತದವಲ್ಲಿ ದುನಿಯಾದಾರ್ ಗೆ ದೀನ್ ಬೇಕು, ದೀನ್ ದಾರ್ ಗೆ ದುನಿಯಾನೂ ಬೇಕು. ಎರಡೂ ಇದ್ದರೆ ಎಲ್ಲರೂ ಇಮಾನ್ ದಾರ್ ಆಗುತ್ತಾರೆ'' ಎಂದು ನುಡಿದರು. 

''ಮುಸ್ಲಿಮ್ ಶಿಕ್ಷಣ ಸಂಸ್ಥೆಗಿಂತ ಪಬ್ಲಿಕ್ ಸ್ಕೂಲ್ ಅಥವಾ ಸೆಂಟ್ರಲ್ ಸ್ಕೂಲ್ ಗಳನ್ನು ಮುನ್ನಡೆಸಿ. ಅವಕಾಶಗಳನ್ನು ಸಂಕುಚಿತಗೊಳಿಸದೇ ಅದನ್ನು ಸಾರ್ವತ್ರಿಕಗೊಳಿಸಿ. ಪ್ರಸ್ತುತ ಸೌಹಾರ್ದಯುತ ಸಮಾಜದ ಅಗತ್ಯವಿದೆ ಎಂದ ಅವರು,  ಪರಸ್ಪರ ಅರಿತುಕೊಳ್ಳಲು ಶಾಲೆಗಳು ಅತ್ಯುತ್ತಮ ಅವಕಾಶವಾಗಿದೆ. ನಮ್ಮ ಮಕ್ಕಳಲ್ಲಿ ದೇವರ ಪ್ರೀತಿಯನ್ನು, ಭಯವನ್ನು ಆಳವಾಗಿ ಬೆಳೆಸಬೇಕು. ಕುರಾನಿನ ಉಪದೇಶ ಮತ್ತು ಮಾರ್ಗದರ್ಶನ ಅವರ ಹೃದಯಕ್ಕೆ ನಾಟುವಂತೆ ವಿವರಿಸುವ ಪ್ರಯತ್ನದಲ್ಲಿ ಯಶಸ್ಸು ಕಂಡರೆ ಮುಂದಿನ ಸವಾಲು ಮತ್ತು ಆತಂಕದಿಂದ ನಮ್ಮ ಪೀಳಿಗೆಯನ್ನು ಸುರಕ್ಷಿತಗೊಳಿಸಬಹುದು'' ಎಂದು ಸಯ್ಯದ್ ಮಹಮ್ಮದ್ ಬ್ಯಾರಿ ಹೇಳಿದರು. 

Similar News