ಎರಡು ತಿಂಗಳ ಪ್ರತಿಭಟನೆ ಬಳಿಕ `ನೈತಿಕತೆ ಪೊಲೀಸ್' ಘಟಕ ರದ್ದುಗೊಳಿಸಿದ ಇರಾನ್

Update: 2022-12-04 16:38 GMT

ಟೆಹ್ರಾನ್, ಡಿ.4: ಸುಮಾರು 2 ತಿಂಗಳ ಪ್ರತಿಭಟನೆಯ ಬಳಿಕ ಇರಾನ್ ತನ್ನ `ನೈತಿಕತೆ(ಸದಾಚಾರ) ಪೊಲೀಸ್' ಘಟಕವನ್ನು ರದ್ದುಗೊಳಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ನೈತಿಕತೆಯ ಪೊಲೀಸರಿಗೆ ನ್ಯಾಯಾಂಗದೊಂದಿಗೆ ಯಾವುದೇ ಸಂಬಂಧವಿಲ್ಲ ಮತ್ತು ಅದನ್ನು ರದ್ದುಗೊಳಿಸಲಾಗಿದೆ ಎಂದು ಅಟಾರ್ನಿ ಜನರಲ್ ಮುಹಮ್ಮದ್ ಜಾಫರ್ ಮೊಂಟಝೆರಿ ಹೇಳಿರುವುದಾಗಿ ಐಎಸ್‍ಎನ್‍ಎ ಸುದ್ಧಿಸಂಸ್ಥೆ ಉಲ್ಲೇಖಿಸಿದೆ. ಮಹಿಳೆಯರು ಶಿರವಸ್ತ್ರ ಧರಿಸಬೇಕೆನ್ನುವ ಕಾನೂನನ್ನು ಬದಲಾಯಿಸುವ ಅಗತ್ಯವಿದೆಯೇ ಎಂಬ ವಿಷಯವನ್ನು ಸಂಸತ್ತು ಮತ್ತು ನ್ಯಾಯಾಂಗ ಎರಡೂ ಪರಿಶೀಲಿಸುತ್ತಿದೆ ಎಂದು ಶನಿವಾರ ಮೊಂಟಝೆರಿ ಹೇಳಿದ್ದರು. 

ಶನಿವಾರ ಟಿವಿ ವಾಹಿಯನ್ನುದ್ದೇಶಿಸಿ ಮಾತನಾಡಿದ್ದ ಅಧ್ಯಕ್ಷ ಇಬ್ರಾಹಿಂ ರೈಸಿ, ಇರಾನ್‍ನ ರಿಪಬ್ಲಿಕನ್ ಹಾಗೂ ಇಸ್ಲಾಮಿಕ್ ಅಡಿಪಾಯಗಳು ಸಾಂವಿಧಾನಿಕವಾಗಿ ಬೇರೂರಿವೆ. ಆದರೆ ಸಂವಿಧಾನವನ್ನು ಅನುಷ್ಟಾನಗೊಳಿಸುವ ವಿಧಾನಗಳಿಗೆ ಅದನ್ನು ಹೊಂದಿಸಬಹುದು ಎಂದಿದ್ದರು.

ದೇಶದ ಕಟ್ಟುನಿಟ್ಟಾದ ಸ್ತ್ರೀ ಉಡುಗೆ ಸಂಹಿತೆಯನ್ನು  ಉಲ್ಲಂಘಿಸಿದ ಆರೋಪದ ಮೇಲೆ ಬಂಧಿಸಲ್ಪಟ್ಟ  ಮಹ್ಸಾ ಅಮೀನಿ ಕಸ್ಟಡಿಯಲ್ಲಿ ಸಾವನ್ನಪ್ಪಿದ ಬಳಿಕ ಇರಾನ್‍ನಾದ್ಯಂತ ಪ್ರತಿಭಟನೆ ನಡೆದಿತ್ತು. ಪ್ರತಿಭಟನೆಯನ್ನು ಹತ್ತಿಕ್ಕುವ ಸಂದರ್ಭ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ಮಧ್ಯೆ ಘರ್ಷಣೆ ಭುಗಿಲೆದ್ದಿತ್ತು.

ಗಷ್ತೆ ಇರ್ಷಾದ್ ಅಥವಾ ಗಸ್ತು ಮಾರ್ಗದರ್ಶನ ಘಟಕ ಎಂದು ಅಧಿಕೃತವಾಗಿ ಕರೆಯಲಾಗುವ ನೈತಿಕತೆ ಪೊಲೀಸ್ ಘಟಕವನ್ನು ಮಹ್ಮೂದ್ ಅಹ್ಮದಿನೆಜಾದ್ ಅವರ ಅಧ್ಯಕ್ಷತೆಯ ಅವಧಿಯಲ್ಲಿ ಸ್ಥಾಪಿಸಲಾಗಿತ್ತು. 2006ರಿಂದ ಈ ಘಟಕ ತನ್ನ ಕಾರ್ಯವನ್ನು ಆರಂಭಿಸಿತ್ತು ವರದಿ ಮಾಡಿಯಾಗಿದೆ.

Similar News