ನಮ್ಮದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸರ್ಕಾರ: ಸಿಎಂ ಬೊಮ್ಮಾಯಿ‌

''ಶಿಗ್ಗಾಂವ್ ಆಸ್ಪತ್ರೆ ಮೇಲ್ದರ್ಜೆಗೆ''

Update: 2022-12-04 16:44 GMT

ಶಿಗ್ಗಾಂವ್, ಡಿ.4: ರಾಜ್ಯದ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ಸ್ಪಂದಿಸಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಈ ವರ್ಷ ನಮ್ಮ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಅತ್ಯಧಿಕ ಹಣವನ್ನು ಬಜೆಟ್ ನಲ್ಲಿ  ನೀಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಇಂದು ಶಿಗ್ಗಾಂವಿಯಲ್ಲಿ 250 ಬೆಡ್ ನ ಆಸ್ಪತ್ರೆ ಮೇಲ್ದರ್ಜೆಗೆರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿಗ್ಗಾಂವಿಯ 100 ಬೆಡ್ ನ ಆಸ್ಪತ್ರೆಯನ್ನು ಮೆಲ್ದರ್ಜೆಗೇರಿಸುತ್ತಿದ್ದೇವೆ. ಈ ಆಸ್ಪತ್ರೆ ಮೊದಲು 50 ಬೆಡ್ ಗಳ ಆಸ್ಪತ್ರೆಯಾಗಿತ್ತು. 2008-2009 ರಲ್ಲಿ 100 ಬೆಡ್ ಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರ್ಪಡಿಸಲಾಗಿತ್ತು. ಈಗ 14 ವೈದ್ಯರು ಜತೆಗೆ ಎಲ್ಲ ವ್ಯವಸ್ಥೆಯೊಂದಿಗೆ ಐಸಿಯು, ಎನ್.ಐ.ಸಿ.ಯು ಮತ್ತು ಡಯಾಲಿಸಿಸ್ ಇರುವಂತಹ ಆಸ್ಪತ್ರೆಯಾಗಿ ತನ್ನ ಸೇವೆ ಸಲ್ಲಿಸುತ್ತಿದೆ. ಆದರೆ ಜನಸಂಖ್ಯೆ ಹೆಚ್ಚಾಗಿದ್ದರಿಂದ ಇದನ್ನು ಮೇಲ್ದರ್ಜೆಗೆ ಏರಿಸಬೇಕೆಂದು 250 ಬೆಡ್ ಗೆ ಈ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ ಎಂದು ತಿಳಿಸಿದರು.

ಕೇವಲ ಬೆಡ್ ಹೆಚ್ಚಿಸುವುದಷ್ಟೇ ಅಲ್ಲ. ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿದ್ದೇವೆ. ಈ ಆಸ್ಪತ್ರೆ ಮೇಲ್ದರ್ಜೆಗೆ ಏರಿದರೆ 10 ರಿಂದ 20 ವರ್ಷದವರೆಗೆ ಶಿಗ್ಗಾಂವ ತಾಲೂಕಿನ ಸೇವೆ ಮಾಡುವುದಕ್ಕೆ ಸಾಧ್ಯವಾಗುತ್ತದೆ ಎನ್ನುವುದು ನನ್ನ ನಂಬಿಕೆ ಎಂದರು.

ಈ ಆಸ್ಪತ್ರೆ ಜಿಲ್ಲಾಸ್ಪತ್ರೆಯಲ್ಲಿ ಯಾವ ರೀತಿಯ ವ್ಯವಸ್ಥೆ ಇದೆ, ಆ ಎಲ್ಲ ವ್ಯವಸ್ಥೆಗಳು ಈ 250 ಬೆಡ್ ನ  ಆಸ್ಪತ್ರೆಯಲ್ಲಿ ಇರುತ್ತದೆ. ಇದರಿಂದ ಈ ಭಾಗದ ಜನರ, ವಿಶೇಷವಾಗಿ ಬಡವರ ಆರೋಗ್ಯದ ಕಾಳಜಿ ಆಗುತ್ತದೆ. ಈ ವರ್ಷ ನಮ್ಮ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಅತ್ಯಧಿಕ ಹಣವನ್ನು ಬಜೆಟ್ ನಲ್ಲಿ ನಾವು ಕೊಟ್ಟಿದ್ದೇವೆ. ಸುಮಾರು 100 ಬೆಡ್ ನ ಆಸ್ಪತ್ರೆಗಳನ್ನು ಜನಸಂಖ್ಯೆ ಹೆಚ್ಚಿರುವ ತಾಲ್ಲೂಕಿನಲ್ಲಿ ಮಾಡುವ ಯೋಜನೆ ಮಾಡುತ್ತಿದ್ದೇವೆ. ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸಮುದಾಯದ ಆರೋಗ್ಯ ಕೇಂದ್ರದಿಂದ 100 ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವುದನ್ನು ಇದೇ ವರ್ಷ ಮಾಡುತ್ತಿದ್ದೇವೆ. 60 ಹೊಸ ಪಿ.ಎಚ್.ಸಿ ಸೆಂಟರ್ ಗಳನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.

ನಮ್ಮ ಬಜೆಟ್ ನಲ್ಲಿ ಹೆಚ್ಚಿನ ಹಣವನ್ನು ಒದಗಿಸಿ ರಾಜ್ಯದಲ್ಲಿ ಪ್ರತಿದಿನ 30 ಸಾವಿರದಿಂದ 60 ಸಾವಿರ ಸೈಕಲ್ ಗೆ ಡಯಾಲಿಸಿಸ್ ನ್ನು ಹೆಚ್ಚಿಸಿದ್ದೇವೆ. 12 ಹೊಸ ಕ್ಯಾನ್ಸರ್ ಕೇಂದ್ರಗಳನ್ನು ನಾವು ಪ್ರಾರಂಭ ಮಾಡುತ್ತಿದ್ದೇವೆ. ಇಡೀ ರಾಜ್ಯದಲ್ಲಿ ಇದೇ ಡಿಸೆಂಬರ್ ನಿಂದ 437 ನಮ್ಮ ಕ್ಲಿನಿಕ್ ಆರಂಭ ಮಾಡುತ್ತಿದ್ದೇವೆ.  ಯಾವುದಾದರೂ ಸಣ್ಣ ಪುಟ್ಟ ರೋಗ ಬಂದರೆ ಜನರು ಮುಖ್ಯ ಆಸ್ಪತ್ರೆಗೆ ಬರುವ ಅವಶ್ಯಕತೆ ಇಲ್ಲ. ನಮ್ಮ ಕ್ಲಿನಿಕ್ ಗೆ ಹೋದರೆ ಅಲ್ಲಿ ಔಷಧ, ಉಪಚಾರ ಮಾಡುವ ವ್ಯವಸ್ಥೆ ನಾವು ಮಾಡಿದ್ದೇವೆ. 60 ಮೇಲ್ಪಟ್ಟವರ ಕಣ್ಣಿನ ತಪಾಸಣೆ ಮಾಡಿ, ಅವರಿಗೆ ಕನ್ನಡಕ ಕೊಡವ ವ್ಯವಸ್ಥೆ ನಾವು ಇದೆ ವರ್ಷ ಮಾಡುತ್ತಿದ್ದೇವೆ. ಕಾಕ್ಲಿಯರ್ ಇಂಪ್ಲಾಂಟ್ ಗೆ 500 ಕೋಟಿ ರೂಪಾಯಿ ಕೊಟ್ಟಿದ್ದೇವೆ. ಹೀಗೆ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ಸ್ಪಂದಿಸಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.

1 ಕೋಟಿಗಿಂತ ಹೆಚ್ಚು ಆಯುಷ್ಯ್ಮಾನ ಕಾರ್ಡ್ ನ್ನು ನಾವು ಇವತ್ತು ಕೊಡುತ್ತಿದ್ದೇವೆ. ಇದೊಂದು ದಾಖಲೆ. ಅದೇ ರೀತಿ ಈ ಭಾಗದಲ್ಲಿ ಹೃದಯಸಂಬಂಧಿ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಜಯದೇವ ಅವರೊಂದಿಗೆ ಸೇರಿ ಮುಂದಿನ ತಿಂಗಳು ಹುಬ್ಬಳ್ಳಿಯಲ್ಲಿ ಆಸ್ಪತ್ರೆಯ ಅಡಿಗಲ್ಲು ಹಾಕುತ್ತಿದ್ದೇವೆ. ಬೆಳಗಾವಿಯಲ್ಲಿ  ಕ್ಯಾನ್ಸರ್ ಗೆ ಸಂಬಂಧಿಸಿದಂತೆ ಕಿದ್ವಾಯಿಯ ಪ್ರಮುಖ ಘಟಕವನ್ನು ಪ್ರಾರಂಭ ಮಾಡುತ್ತಿದ್ದೇವೆ ಎಂದು ಹೇಳಿದರು.

ಸವಣೂರಿನಲ್ಲಿ ಆರ್ಯುವೇದಿಕ ಕಾಲೇಜನ್ನು ಇದೇ ವರ್ಷ ಪ್ರಾರಂಭ ಮಾಡುತ್ತಿದ್ದೇವೆ.‌ ಮುಂದಿನ 15 ದಿನಗಳಲ್ಲಿ ಅದಕ್ಕೆ ನಾನು ಬಂದು ಅಡಿಗಲ್ಲು ಹಾಕುತ್ತೇನೆ. ಹಾವೇರಿ ಮೆಡಿಕಲ್ ಕಾಲೇಜು ನಿರ್ಮಾಣ ಕಾರ್ಯ ವೇಗವಾಗಿ ನೆಡೆಯುತ್ತಿದೆ. ಫೆಬ್ರವರಿ, ಮಾರ್ಚ್‌ನಲ್ಲಿ ಮೆಡಿಕಲ್ ಆರಂಭ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದೇವೆ. ಇದರ ಜತೆಗೆ ಹಾವೇರಿಯಲ್ಲಿ 400 ಬೆಡ್ ಗಳ ದೊಡ್ಡ ಆಸ್ಪತ್ರೆ ಬರುತ್ತದೆ. ‌ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಿ, ಈ ಭಾಗದಲ್ಲಿ ಬಹಳ ದಿನಗಳಿಂದ ವಂಚಿತವಾಗಿರುವ ಯೋಜನೆಗಳಿಗೆ ನಮ ಸರ್ಕಾರ ಕಾಯಕಲ್ಪವನ್ನು ಕೊಟ್ಟು ಕೆಲಸ ಮಾಡುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ‌ ತಿಳಿಸಿದರು.

''ಕೋವಿಡ್ ನಿಯಂತ್ರಣಕ್ಕೆ ವೈದ್ಯರ ಸೇವೆ ಅಪಾರ''

ಕೋವಿಡ್ ಸಮಯದಲ್ಲಿ ವೈದ್ಯರು ತಮ್ಮ ಜೀವದ ಹಂಗು ತೊರೆದು ರೋಗಿಗಳ ಸೇವೆ ಮಾಡಿ ಬಹಳಷ್ಟು ಜನರ ಜೀವವನ್ನು ಉಳಿಸಿದ್ದಾರೆ. ಅವರಿಗೆ ಹೃದಯದಿಂದ ಅಭಿನಂದನೆ ಸಲ್ಲಿಸುತ್ತೇನೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನೀಡಿದ ವ್ಯಾಕ್ಸಿನೇಷನ್‌ ನಿಂದ ಕೋವಿಡ್ ನಿಯಂತ್ರಣ ಸಾಧ್ಯವಾಗಿದೆ. ಬಹಳಷ್ಟು ಸಾವು ನೋವುಗಳ ತಪ್ಪಿದ್ದು, ನಾವು ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಾರಿಯಾಗಿರಬೇಕು  ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

Similar News