ಪಾಕ್ ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್: 27 ಕೆ.ಜಿ. ಹೆರಾಯಿನ್, ಪಿಸ್ತೂಲ್ ವಶ

Update: 2022-12-04 17:54 GMT

ಚಂಡೀಗಢ,ಡಿ.4: ಗಡಿಯಾಚೆಯಿಂದ ಡ್ರೋನ್ ಮೂಲಕ ಮಾದಕದ್ರವ್ಯ ಕಳ್ಳಸಾಗಣೆಯ ಇನ್ನೊಂದು ಪ್ರಯತ್ನವನ್ನು ಭಾರತೀಯ ಗಡಿಭದ್ರತಾ ಪಡೆ ವಿಫಲಗೊಳಿಸಿದೆ. ಪಂಜಾಬ್‌ನ ಫಜಿಲ್ಕಾ ಜಿಲ್ಲೆಯಲ್ಲಿ ಶನಿವಾರ ಡ್ರೋನ್ ಒಂದನ್ನು ಹೊಡೆದುರುಳಿಸಿರುವ ಬಿಎಸ್‌ಎಫ್ ಯೋಧರು, 27 ಕೆ.ಜಿ. ಹೆರಾಯಿನ್ ವಶಪಡಿಸಿಕೊಂಡಿದ್ದಾರೆ. 

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 125 ಕೋಟಿ ರೂ. ಬೆಲೆಬಾಳುವ ಈ ಹೆರಾಯಿನ್ ಜೊತೆ ಪಿಸ್ತೂಲ್ ಹಾಗೂ ಬುಲೆಟ್‌ಗಳು ಕೂಡಾ ಪತ್ತೆಯಾಗಿವೆ. ಮಾದಕದ್ರವ್ಯದ ಮಾಲನ್ನು ಪಡೆದುಕೊಳ್ಳಲು ಬಂದಿದ್ದ 3-4 ಮಂದಿ ಶಂಕಿತರ ಮೇಲೆ ಬಿಎಸ್‌ಎಫ್ ಯೋಧರು ಗುಂಡು ಹಾರಿಸಿದ್ದು, ಅವರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.

ಫಝಿಲ್ಕಾ ಜಿಲ್ಲೆಯ ಚೂರಿವಾಲಾ ಚುಸ್ತಿ ಗ್ರಾಮದ ಸಮೀಪ ರಾತ್ರಿ 12:05ರ ವೇಳೆಗೆ ಭಾರತದ ಪ್ರಾಂವನ್ನು ಡ್ರೋನೊಂದು ಪ್ರವೇಶಿಸುತ್ತಿರುವ ಸದ್ದು ಕೇಳಿ ಬಂದಿತ್ತು. ಆಗ ಬಿಎಸ್‌ಎಫ್ ಯೋಧರು ಸದ್ದುಬಂದ ದಿಕ್ಕಿನತ್ತ ಗುಂಡು ಹಾರಿಸಿ ಡ್ರೋನ್ ಅನ್ನು ಹೊಡೆದುರುಳಿಸಿದ್ದಾರೆ.

  ರವಿವಾರ ಬೆಳಗ್ಗೆ ಬಿಎಸ್‌ಎಫ್ ಯೋಧರು ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು, ಡ್ರೋನ್ ಎಸೆದಿದ್ದ 27 ಕೆ.ಜಿ.ಭಾರದ ಹೆರಾಯಿನ್, ಪಾಕ್ ನಿರ್ಮಿತ ಪಿಸ್ತೂಲು, ಎರಡು ಕಾಡತೂಸುಗಳು ಹಾಗೂ 50 ಸುತ್ತುಗಳ 9 ಎಂ.ಎಂ. ಪಿಸ್ತೂಲ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ಬಿಎಸ್‌ಎಫ್ ಮೂಲಗಳು ತಿಳಿಸಿವೆ.

Similar News