ಗಡಿ ವಿವಾದ: ಬೆಳಗಾವಿಯಲ್ಲಿ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ

ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬರಲು ಬಿಡುವುದಿಲ್ಲ ಎಂದ ಜಿಲ್ಲಾಧಿಕಾರಿ

Update: 2022-12-05 10:59 GMT

ಬೆಳಗಾವಿ: ಮಹಾರಾಷ್ಟ್ರದ ಗಡಿ ಜಿಲ್ಲೆ ಉಸ್ತುವಾರಿ ಸಚಿವರಾದ ಚಂದ್ರಕಾಂತ ಪಾಟೀಲ್, ಶಂಭುರಾಜ್‌ ದೇಸಾಯಿ ಹಾಗೂ ಮಹಾರಾಷ್ಟ್ರ ಗಡಿ ಸಲಹಾ ಸಮಿತಿ ಅಧ್ಯಕ್ಷ ಧೈರ್ಯಶೀಲ ಮಾನೆ ಅವರು ಡಿಸೆಂಬರ್ 6ರಂದು ಬೆಳಗಾವಿಗೆ ಭೇಟಿ ನೀಡುತ್ತಿರುವುದನ್ನು ವಿರೋಧಿಸಿ  ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿವೆ. 

ಮಹಾರಾಷ್ಟ್ರ ಸಚಿವರ ನಡೆ ಖಂಡಿಸಿ, ಸೋಮವಾರ ಬೆಂಗಳೂರಿನಿಂದ ವಿವಿಧ ಕನ್ನಡ ಸಂಘಟನೆಗಳ ಕಾರ್ಯಕರ್ತರು ಬೆಳಗಾವಿಯತ್ತ ತೆರಳಿದ್ದು, ನಗರದ  ರಾಣಿ ಚನ್ನಮ್ಮನ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.  

ವಿವಿಧ ಕನ್ನಡ ಪರ ಸಂಘಟನೆಗಳ ಮನವಿ ಸ್ವೀಕರಿಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್  ಅವರು, 'ಉಭಯ ರಾಜ್ಯಗಳ ನಡುವಿನ ಗಡಿ ವಿವಾದ ಭುಗಿಲೆದ್ದಿರುವ ಈ ಸಂದರ್ಭದಲ್ಲಿ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬರಲು ಬಿಡುವುದಿಲ್ಲ' ಎಂದು ಸ್ಪಷ್ಟಪಡಿಸಿದರು.  

''ಗಡಿಯಲ್ಲಿ ಈಗ ಪರಿಸ್ಥಿತಿ ಬಿಗಡಾಯಿಸಿದೆ. ಇಂತಹ ವೇಳೆ ಬೆಳಗಾವಿಗೆ ಬಂದರೆ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಬರಲಿದೆ. ಮೂವರಿಗೆ ಸುರಕ್ಷತೆ ಒದಗಿಸಲು ಕಷ್ಟವಾಗಲಿದೆ. ಹಾಗಾಗಿ ಬೆಳಗಾವಿಗೆ ಬಾರದಿರುವುದೇ ಸೂಕ್ತ ಎಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮಹಾರಾಷ್ಟ್ರ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಿದ್ದಾರೆ'' ಎಂದು ತಿಳಿಸಿದರು. 

Similar News