ಗುಜರಾತ್: ಕಾಂಗ್ರೆಸ್-ಬಿಜೆಪಿ ನಾಯಕರ ಬೆಂಬಲಿಗರ ನಡುವೆ ಘರ್ಷಣೆ

Update: 2022-12-05 10:18 GMT

ಪಾಲನ್ಪುರ: ಗುಜರಾತ್ನ ಬನಸ್ಕಾಂತ ಜಿಲ್ಲೆಯ ದಾಂತಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳ ಬೆಂಬಲಿಗರು ತಮ್ಮ ಇಬ್ಬರು ನಾಯಕರ ವಾಹನಗಳ ನಡುವೆ ಢಿಕ್ಕಿಯಾದ ಬಳಿಕ ಪರಸ್ಪರ ಘರ್ಷಣೆ ನಡೆಸಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ರವಿವಾರ ರಾತ್ರಿ 10.30ರ ಸುಮಾರಿಗೆ ನಡೆದ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಬನಸ್ಕಾಂತ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅಕ್ಷಯರಾಜ್ ಮಕ್ವಾನಾ ಪಿಟಿಐಗೆ ತಿಳಿಸಿದ್ದಾರೆ.

ಪಕ್ಷದ ಬುಡಕಟ್ಟು ನಾಯಕ ಮತ್ತು ದಾಂತಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕಾಂತಿಭಾಯ್ ಖರಾಡಿ ಅವರ ಮೇಲೆ ಬಿಜೆಪಿ ಗೂಂಡಾಗಳು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಆ ನಂತರ ಖರಾಡಿ ನಾಪತ್ತೆಯಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಡರಾತ್ರಿ ಟ್ವೀಟ್ ಮಾಡಿದ್ದಾರೆ.

ದಾಂತಾ ಕ್ಷೇತ್ರದ ಹಾಲಿ ಶಾಸಕ ಖರಾಡಿ ಮತ್ತು ಬಿಜೆಪಿ ನಾಮನಿರ್ದೇಶಿತ ಅಭ್ಯರ್ಥಿ ಲಾತು ಪರ್ಘಿ ಅವರ ವಾಹನಗಳ ನಡುವೆ ಢಿಕ್ಕಿ ಹೊಡೆದ ನಂತರ ಪರಸ್ಪರರ ಬೆಂಬಲಿಗರು ಮಾರಕಾಯುಧಗಳಿಂದ ಹೊಡೆದಾಡಿಕೊಂಡಿದ್ದಾರೆ ಎಂದು ಎಸ್ಪಿ ಮಕ್ವಾನಾ ಹೇಳಿದರು.

Similar News