'ಕನ್ನಡ ಅಭಿವೃದ್ಧಿ ಪ್ರಾಧಿಕಾರ'ಕ್ಕೆ ಸಚಿವ ಸುನಿಲ್ ಕುಮಾರ್ ನೇಮಕ ಸರಿಯಲ್ಲ: ಮುಖ್ಯಮಂತ್ರಿ ಚಂದ್ರು

Update: 2022-12-05 13:43 GMT

ಬೆಂಗಳೂರು, ಡಿ.5: ಸಚಿವ ಸುನಿಲ್ ಕುಮಾರ್ ಅವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಸರಿಯಲ್ಲ ಎಂದು ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ವಿರೋಧ ವ್ಯಕ್ತಪಡಿಸಿದ್ದಾರೆ.

ಸೋಮವಾರ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಪ್ರಾಧಿಕಾರವು ನಾಡಿನ ಅಸ್ಮಿತೆ ಕಾಪಾಡುವ ಸಂಸ್ಥೆಯಾಗಿದ್ದು, ಇದು ಬಹುಕಾಲದಿಂದ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮಗಳನ್ನು ನಡೆಸುತ್ತಾ ಮತ್ತು ಅದಕ್ಕೆ ಪೂರಕವಾದ ವಾತಾವರಣ ನಿರ್ಮಿಸುತ್ತಾ ಬಂದಿದೆ. ಇದು ಮುಂದುವರಿಯಬೇಕಾದರೆ ರಾಜಕೀಯೇತರ ವ್ಯಕ್ತಿಯೆ ಪ್ರಾಧಿಕಾರದ ಅಧ್ಯಕ್ಷರಾಗಿರಬೇಕು ಎಂದು ಹೇಳಿದರು.

ಕನ್ನಡ ನೆಲ, ಜಲ, ನುಡಿ ವಿಚಾರ ಬಂದಾಗಲೆಲ್ಲ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕರ್ತವ್ಯವಾಗಿದೆ. ರಾಜಕೀಯ ಸಿದ್ಧಾಂತಗಳನ್ನು ಬದಿಗಿಟ್ಟು ಕೇವಲ ಭಾಷಾಭಿಮಾನದಿಂದ ಕೆಲಸ ಮಾಡುವ ವ್ಯಕ್ತಿ ಅದರ ಅಧ್ಯಕ್ಷರಾಗಬೇಕು. ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದರೂ ಹಿಂದಿ ಹೇರಿಕೆ, ಕನ್ನಡಿಗರಿಗೆ ಉದ್ಯೋಗದಲ್ಲಾಗುತ್ತಿರುವ ಮೋಸ, ಗಡಿನಾಡ ಕನ್ನಡಿಗರ ಮೇಲೆ ಆಗುತ್ತಿರುವ ದೌರ್ಜನ್ಯ ಮುಂತಾದವುಗಳನ್ನು ವಿರೋಧಿಸದ ಪ್ರಭಾವಿ ಸಚಿವರು ಪ್ರಾಧಿಕಾರದ ಅಧ್ಯಕ್ಷರಾಗಿರುವುದು ಕಳವಳಕಾರಿ ಎಂದು ಆಕ್ರೋಶವ್ಯಕ್ತಪಡಿಸಿದರು.

ನಾಲ್ಕು ಎಂಜಿನ್‍ಗಳ ಸರಕಾರವಿದ್ದರೂ ನಿರ್ಲಕ್ಷ್ಯ:

‘2018ರಲ್ಲಿ ಉತ್ತರ ಕರ್ನಾಟಕಕ್ಕೆ ಬಂದಿದ್ದ ಬಿಜೆಪಿಯ ಅಮಿತ್ ಶಾ, ಬಿಜೆಪಿ ಅಧಿಕಾರಕ್ಕೆ ಬಂದರೆ ಮಹದಾಯಿ ವಿವಾದ ಬಗೆಹರಿಸುವುದಾಗಿ ಹೇಳಿದ್ದರು.  ಕರ್ನಾಟಕ, ಗೋವಾ, ಮಹಾರಾಷ್ಟ್ರ ಹಾಗೂ ಕೇಂದ್ರದಲ್ಲಿ ಬಿಜೆಪಿಯ ನಾಲ್ಕು ಎಂಜಿನ್ ಸರಕಾರವಿದ್ದರೂ, ವಿವಾದ ಬಗೆಹರಿಸುವ ಬದಲು ರಾಜಕೀಯ ಲಾಭಕ್ಕಾಗಿ ಸಮಸ್ಯೆಯನ್ನು ದೊಡ್ಡದು ಮಾಡಲಾಗುತ್ತಿದೆ. ಬೊಮ್ಮಾಯಿಯವರು ಧಮ್ಮು, ತಾಕತ್ತು ಇದ್ದರೆ ನಾಲ್ಕು ಎಂಜಿನ್‍ಗಳನ್ನು ಬಳಸಿಕೊಂಡು ಗಡಿ, ಜಲ ಸಮಸ್ಯೆಗಳನ್ನು ಬಗೆಹರಿಸಲಿ’

-ಮುಖ್ಯಮಂತ್ರಿ ಚಂದ್ರು, ಆಮ್ ಆದ್ಮಿ ಪಾರ್ಟಿ ಮುಖಂಡ

Similar News