ಚುನಾವಣೋತ್ತರ ಸಮೀಕ್ಷೆ ಪ್ರಕಟ: ಗುಜರಾತ್‌, ಹಿಮಾಚಲದಲ್ಲಿ ಬಿಜೆಪಿಗೆ ಬಹುಮತ, ಎಎಪಿಯ ಕಳಪೆ ಪ್ರದರ್ಶನ

Update: 2022-12-05 13:46 GMT

ಹೊಸದಿಲ್ಲಿ: ಗುಜರಾತ್ ವಿಧಾನಸಭೆಗೆ 14 ಜಿಲ್ಲೆಗಳ 93 ಸ್ಥಾನಗಳಿಗೆ ಎರಡನೇ ಹಂತದ ಮತದಾನ ಮುಕ್ತಾಯಗೊಂಡಿದ್ದು, ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದೆ, ನವೆಂಬರ್ 12 ರಂದು ಚುನಾವಣೆ ನಡೆದ ಹಿಮಾಚಲ ಪ್ರದೇಶದ ಚುನಾವಣೋತ್ತರ ಸಮೀಕ್ಷೆಯೂ ಹೊರಬಿದ್ದಿದ್ದು, ಎರಡೂ ರಾಜ್ಯದಲ್ಲಿ ಬಿಜೆಪಿಯೇ ಸರ್ಕಾರ ರಚಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ.

ಗುಜರಾತ್‌ ಹಾಗೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಬಹುಮತ ಸಾಧಿಸಲಿದ್ದು, ಕಾಂಗ್ರೆಸ್‌ ಎರಡನೇ ಸ್ಥಾನದಲ್ಲಿರಲಿದೆ ಹಾಗೂ ಎಎಪಿ ಕಳಪೆ ಪ್ರದರ್ಶನ ನೀಡಲಿದೆ ಎಂದು ಇಂದು ಸಂಜೆ ಹೊರಬಿದ್ದ ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ.

182 ವಿಧಾನಸಭಾ ಕ್ಷೇತ್ರಗಳಿರುವ ಗುಜರಾತ್ ನಲ್ಲಿ ಬಹುಮತ ಸಾಧಿಸಲು 92 ಸ್ಥಾನಗಳು ಬೇಕಿದ್ದು, ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಸಾಧಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ. 68 ಕ್ಷೇತ್ರಗಳಿರುವ ಹಿಮಾಚಲ ಪ್ರದೇಶದಲ್ಲಿ ಬಹುಮತಕ್ಕೆ 35 ಸ್ಥಾನಗಳ ಅಗತ್ಯವಿದ್ದು ಇಲ್ಲೂ ಬಿಜೆಪಿ ಬಹುಮತದ ಸನಿಹಕ್ಕೆ ಬಂದು ನಿಲ್ಲಲಿದೆ ಎಂದು ಸಮೀಕ್ಷೆಗಳು ಹೇಳಿವೆ.

Jan Ki Baat ಸಮೀಕ್ಷೆ ಪ್ರಕಾರ ಗುಜರಾತಿನಲ್ಲಿ ಬಿಜೆಪಿ 117-140 ಸೀಟುಗಳನ್ನು ಗೆಲ್ಲಬಹುದು, ಕಾಂಗ್ರೆಸ್‌ 34-51 ಸ್ಥಾನಗಳನ್ನು ಗೆದ್ದರೆ, ಭಾರೀ ನಿರೀಕ್ಷೆ ಹುಟ್ಟಿಸಿದ್ದ ಎಎಪಿ 6-13 ಸ್ಥಾನಗಳನ್ನು ಗೆಲ್ಲಬಹುದು, 1-2 ಸ್ಥಾನಗಳು ಇತರೆ ಪಾಲಾಗಬಹುದು.  Republic TV P-MARQ ಸಮೀಕ್ಷೆ ಪ್ರಕಾರ ಗುಜರಾತಿನಲ್ಲಿ 128-148 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. 30-42 ಸ್ಥಾನಗಳು ಕಾಂಗ್ರೆಸ್‌ ಗೆಲ್ಲಲಿದೆ. 

ಹಿಮಾಚಲ ಪ್ರದೇಶದಲ್ಲಿ ಬಿಜೆಪಿ 32-40 ಸ್ಥಾನಗಳನ್ನು ಗೆಲ್ಲಬಹುದು, ಕಾಂಗ್ರೆಸ್ 27-34  ಸ್ಥಾನ ಗೆದ್ದರೆ ಎಎಪಿ 0 ಹಾಗೂ 1-2 ಸ್ಥಾನಗಳು ಇತರೆ ಪಾಲಾಗಬಹುದು ಎಂದು ಹೇಳಿದೆ.

ಈ ಸಮೀಕ್ಷೆಯ ಪ್ರಕಾರ ಹಿಮಾಚಲ ಪ್ರದೇಶದಲ್ಲಿ ಅತಂತ್ರ ಪರಿಸ್ಥಿತಿ ಉದ್ಭವಿಸುವ ಸಾಧ್ಯತೆ ಇದೆ. ಹಿಮಾಚಲ ಪ್ರದೇಶದ ವಿಷಯದಲ್ಲಿ P-MARQ ಸಮೀಕ್ಷೆ ಕೂಡಾ ಇಂತಹದ್ದೇ ಫಲಿತಾಂಶವನ್ನು ಹೇಳಿದೆ. ಬಿಜೆಪಿ 34-39 ಸ್ಥಾನಗಳು ಹಾಗೂ ಕಾಂಗ್ರೆಸ್ 28-33 ಸ್ಥಾನಗಳು ಗೆದ್ದರೆ ಎಎಪಿ 0-1 ಹಾಗೂ ಇತರೆ 1-4 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದೆ.

TimesNow-ETG ಸಮೀಕ್ಷೆ ಪ್ರಕಾರ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ 38, ಕಾಂಗ್ರೆಸ್ 28 ಎಎಪಿ 0 ಹಾಗೂ ಇತರೆ 2 ಸ್ಥಾನಗಳನ್ನು ಗೆಲ್ಲಲಿದೆ.

Similar News