ನನ್ನನ್ನು ಬಂಧಿಸಲಾಗಿಲ್ಲ, ಪಂಜಾಬ್ ಸಿಎಂ ಸುಳ್ಳು ಹೇಳಿದ್ದಾರೆ: ವೀಡಿಯೋವೊಂದರಲ್ಲಿ ಗ್ಯಾಂಗ್‍ಸ್ಟರ್ ಗೋಲ್ಡಿ ಬ್ರಾರ್

Update: 2022-12-05 15:02 GMT

ಹೊಸದಿಲ್ಲಿ: ಪಂಜಾಬ್ (Punjab) ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ (Bhagwant Mann) ಅವರಿಗೆ ಮುಜುಗರವುಂಟು ಮಾಡುವ ಬೆಳವಣಿಗೆಯೊಂದರಲ್ಲಿ ಗ್ಯಾಂಗ್‍ಸ್ಟರ್ ಗೋಲ್ಡಿ ಬ್ರಾರ್ ನ (Gangster Goldy Brar) ಸಂದರ್ಶನದ ವೀಡಿಯೋವೊಂದು ಹರಿದಾಡುತ್ತಿದ್ದು, ಅದರಲ್ಲಿ ಆತ ತನ್ನನ್ನು ಅಮೆರಿಕಾದಲ್ಲಿ ಅಧಿಕಾರಿಗಳು ಬಂಧಿಸಿದ್ದಾರೆಂಬುದನ್ನು ನಿರಾಕರಿಸಿದ್ದಾನೆ. ಆದರೆ ಈ ವೀಡಿಯೋದ ಸತ್ಯಾಸತ್ಯತೆ ಇನ್ನೂ ತಿಳಿದು ಬಂದಿಲ್ಲ ಎಂದು news18.com ವರದಿ ಮಾಡಿದೆ.

ಗೋಲ್ಡಿ ಬ್ರಾರ್ ನನ್ನು ಗಾಯಕ ಸಿಧು ಮೂಸೆವಾಲ ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಡಿಸೆಂಬರ್ 2 ರಂದು ಪಂಜಾಬ್ ಮುಖ್ಯಮಂತ್ರಿ ಮಾನ್  ಅವರು ದೃಢಪಡಿಸಿದ ಬೆನ್ನಲ್ಲೇ ಈ ವೀಡಿಯೋ ಹೊರಬಿದ್ದಿದೆ.

ಯುಟ್ಯೂಬ್ ಪತ್ರಕರ್ತರೊಬ್ಬರಿಗೆ ಬ್ರಾರ್ ನೀಡಿದ್ದನೆನ್ನಲಾದ ಸಂದರ್ಶನದ ವೀಡಿಯೋ ಇದೆನ್ನಲಾಗಿದೆ. "ಮುಖ್ಯಮಂತ್ರಿಯ ಹೇಳಿಕೆ ತಪ್ಪು. ನಾನು ಅಮೆರಿಕಾದಲ್ಲಿಲ್ಲ ಆದುದರಿಂದ ನನ್ನ ಬಂಧನದ ಪ್ರಶ್ನೆ ಬರುವುದಿಲ್ಲ,'' ಎಂದು ಪತ್ರಕರ್ತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವೀಡಿಯೋದಲ್ಲಿ ಬ್ರಾರ್ ಹೇಳುತ್ತಿರುವುದು ಕೇಳಿಸುತ್ತದೆ.

ಗುಜರಾತ್ ಚುನಾವಣಾ ಪ್ರಚಾರದ ವೇಳೆ ಬ್ರಾರ್ ಬಂಧನ ಕುರಿತು ಮಾಹಿತಿ ನೀಡಿದ್ದ ಮಾನ್,  "ಇದು ಗ್ಯಾಂಗ್‍ಸ್ಟರ್ ಗಳ ವಿರುದ್ಧ ದೊಡ್ಡ ಯಶಸ್ಸು,'' ಎಂದಿದ್ದರು.

ಆದರೆ ಮಾನ್ ಅವರು ಚುನಾವಣಾ ಲಾಭಕ್ಕಾಗಿ ಜನರನ್ನು ತಪ್ಪು ದಾರಿಗೆಳೆದಿದ್ದಾರೆ ಎಂದು ಈಗ ಅವರ ಎದುರಾಳಿಗಳು ಆರೋಪಿಸಿದ್ದಾರೆ.

``ಮಾನ್ ಅವರು ತಮ್ಮ ಹೇಳಿಕೆ ಕುರಿತು ಸ್ಪಷ್ಟಪಡಿಸಬೇಕು, ಬ್ರಾರ್ ಹೇಳಿದ್ದು ನಿಜವೆಂದಾದರೆ, ಮುಖ್ಯಮಂತ್ರಿ ಚುನಾವಣಾ ಲಾಭಕ್ಕಾಗಿ ಸುಳ್ಳು ಹೇಳಿದರೆಂದಾಗುತ್ತದೆ,'' ಎಂದು ಕಾಂಗ್ರೆಸ್ ನಾಯಕ ರಾಜಾ ವರ್ರಿಂಗ್ ಹೇಳಿದ್ದಾರೆ.

ಶಿರೋಮಣಿ ಅಕಾಲಿ ದಳ ನಾಯಕ ಬಿಕ್ರಮ್ ಮಜಿತಿಯಾ ಪ್ರತಿಕ್ರಿಯಿಸಿ, ಪಂಜಾಬ್ ಸಿಎಂ ಹೇಳಿಕೆ ಸಿದ್ದು ಮೂಸೆವಾಲ ಪ್ರಕರಣದಲ್ಲಿ ಪಂಜಾಬ್ ಪೊಲೀಸರಿಗೆ ಹಿನ್ನಡೆಯಾಗಿದೆ ಎಂದಿದ್ದಾರೆ.

ಹತ್ಯೆ ಪ್ರಕರಣದ ಹೆಚ್ಚಿನ ಆರೋಪಿಗಳನ್ನು ದಿಲ್ಲಿ ಪೊಲೀಸರ ವಿಶೇಷ ಸೆಲ್ ಈಗಾಗಲೇ ಬಂಧಿಸಿದ್ದರೆ ಪ್ರಮುಖ ಆರೋಪಿ ದೀಪಕ್ ಟಿನಾ ಎಂಬಾತ ಮನ್ಸಾ ಪೊಲೀಸರ ಕಸ್ಟಡಿಯಿಂದ ಪರಾರಿಯಾಗಿದ್ದಾನೆ.

Similar News