ಚಲನಶೀಲತೆ ಒಪ್ಪಂದಕ್ಕೆ ಭಾರತ-ಜರ್ಮನಿ ಅಂಕಿತ: ಪ್ರಮುಖ ಜಾಗತಿಕ ಸವಾಲುಗಳ ಕುರಿತು ಚರ್ಚೆ

Update: 2022-12-05 16:02 GMT

ಹೊಸದಿಲ್ಲಿ,ಡಿ.5: ಚಲನಶೀಲತೆ ಪಾಲುದಾರಿಕೆ ಒಪ್ಪಂದಕ್ಕೆ ಸೋಮವಾರ ಅಂಕಿತ ಹಾಕಿದ ಭಾರತ(India) ಮತ್ತು ಜರ್ಮನಿ ಉಕ್ರೇನ್ ಬಿಕ್ಕಟ್ಟು,ಅಫ್ಘಾನಿಸ್ತಾನದಲ್ಲಿಯ ಪರಿಸ್ಥಿತಿ ಮತ್ತು ಪಾಕಿಸ್ತಾನದಿಂದ ಹೊರಹೊಮ್ಮುತ್ತಿರುವ ಗಡಿಯಾಚೆಯ ಭಯೋತ್ಪಾದನೆ ಸೇರಿದಂತೆ ಪ್ರಮುಖ ಜಾಗತಿಕ ಸವಾಲುಗಳ ಬಗ್ಗೆ ಚರ್ಚಿಸಿದವು.

ಮಾತುಕತೆಗಳ ಬಳಿಕ ಜರ್ಮನ್ ವಿದೇಶಾಂಗ ಸಚಿವೆ ಅನಾಲಿನಾ ಬೇರ್ಬಾಕ್ (Analina Bearbach)ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ (S. Jaishankar)ಅವರು,ಚಲನಶೀಲತೆ ಒಪ್ಪಂದವು ಉಭಯ ರಾಷ್ಟ್ರಗಳ ಜನರು ಪರಸ್ಪರರ ದೇಶಗಳಲ್ಲಿ ಅಧ್ಯಯನ ಮತ್ತು ಸಂಶೋಧನೆ ನಡೆಸುವುದನ್ನು ಹಾಗೂ ಕೆಲಸ ಮಾಡುವುದನ್ನು ಸುಲಭವಾಗಿಸುತ್ತದೆ ಮತ್ತು ಅದು ಹೆಚ್ಚು ಸಮಕಾಲೀನವಾದ ದ್ವಿಪಕ್ಷೀಯ ಪಾಲುದಾರಿಕೆಯ ಪ್ರಬಲ ಸಂಕೇತವಾಗಿದೆ ಎಂದು ಹೇಳಿದರು.

ಭಾರತವು ರಶ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ಬಲವಾಗಿ ಸಮರ್ಥಿಸಿಕೊಂಡ ಜೈಶಂಕರ, ಅದು ಹೆಚ್ಚಾಗಿ ಮಾರುಕಟ್ಟೆ ಶಕ್ತಿಗಳಿಂದ ಪ್ರೇರಿತವಾಗಿದೆ ಎಂದು ಬೆಟ್ಟು ಮಾಡಿದರು.

ಭಾರತವೇಕೆ ರಶ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ ಎಂಬ ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು,ಫೆಬ್ರವರಿಯಿಂದ ನವಂಬರ್ವರೆಗೆ ಐರೋಪ್ಯ ಒಕ್ಕೂಟವು ತನ್ನ ನಂತರದ 10 ದೇಶಗಳ ಒಟ್ಟು ಆಮದಿಗಿಂತ ಅಧಿಕ ಕಚ್ಚಾ ತೈಲವನ್ನು ರಶ್ಯಾದಿಂದ ಆಮದು ಮಾಡಿಕೊಂಡಿದೆ ಎಂದರು.

ಇಂಧನ,ವ್ಯಾಪಾರ,ರಕ್ಷಣೆ,ಭದ್ರತೆ ಮತ್ತು ಹವಾಮಾನ ಬದಲಾವಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಇನ್ನಷ್ಟು ವಿಸ್ತರಿಸಲು ಮಾರ್ಗೋಪಾಯಗಳನ್ನು ಚರ್ಚಿಸಲು ಬೇರಬಾಕ್ ಎರಡು ದಿನಗಳ ಭಾರತ ಭೇಟಿಗಾಗಿ ಸೋಮವಾರ ಬೆಳಿಗ್ಗೆ ದಿಲ್ಲಿಗೆ ಆಗಮಿಸಿದ್ದಾರೆ.

ಉಕ್ರೇನ್ ವಿಷಯದಲ್ಲಿ ಭಾರತದ ನಿಲುವು ಸ್ಪಷ್ಟವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ ಜೈಶಂಕರ್,‘ಇದು ಯುದ್ಧದ ಯುಗವಲ್ಲ ಮತ್ತು ಮಾತುಕತೆಗಳ ಮೂಲಕ ಸಂಘರ್ಷ   ಬಗೆಹರಿಯಬೇಕು ಎನ್ನುವುದು ನಮ್ಮ ಖಚಿತ ಅಭಿಪ್ರಾಯವಾಗಿದೆ ’ ಎಂದರು.

ಭಾರತವು ಅನೇಕ ದೇಶಗಳಿಗೆ ಮಾದರಿಯಾಗಿದೆ ಎಂದು ಬಣ್ಣಿಸಿದ ಬೇರಬಾಕ್,ತನ್ನ ದೇಶವು ಭಾರತದೊಂದಿಗೆ ತನ್ನ ಭದ್ರತಾ ಸಹಕಾರವನ್ನು ಹೆಚ್ಚಿಸಲು ಬಯಸಿದೆ ಎಂದರು.

ಪ್ರದೇಶವು ಚೀನಾದಿಂದ ಎದುರಿಸುತ್ತಿರುವ ಸವಾಲುಗಳ ಕುರಿತ ಪ್ರಶ್ನೆಗೆ ಬೇರಬಾಕ್,ಹಲವಾರು ರೀತಿಗಳಲ್ಲಿ ಚೀನಾ ಸ್ಪರ್ಧಿ ಮತ್ತು ಪ್ರತಿಸ್ಪರ್ಧಿಯಾಗಿದೆ. ಅದರ ಬೆದರಿಕೆಗಳ ಮೌಲ್ಯಮಾಪನ ಅಗತ್ಯವಿದೆ ಎಂದು ಉತ್ತರಿಸಿದರು.

Similar News