ಮದ್ದೂರು ಪೊಲೀಸರ ಕಾರ್ಯಾಚರಣೆ: ಅಂತಾರಾಜ್ಯ ಕಳವು ಆರೊಪಿಯ ಬಂಧನ, 34 ದ್ವಿಚಕ್ರಗಳ ವಾಹನಗಳ ವಶ

Update: 2022-12-05 17:31 GMT

ಮಂಡ್ಯ, ಡಿ.5: ಬೈಕ್‍ಗಳನ್ನು ಕದಿಯುತ್ತಿದ್ದ ಆರೊಪಿಯ ಬಂಧಿಸಿರುವ ಮದ್ದೂರು ಪೊಲೀಸರು ಆತನಿಂದ 16.40 ಲಕ್ಷ ರೂ. ಮೌಲ್ಯದ ವಿವಿಧ ಮಾದರಿಯ 34 ಬೈಕ್‍ಗಳನ್ನು ವಶಕ್ಕೆ ಪಡೆದಿದ್ದಾರೆ. 

ಚಾಮರಾಜನಗರ ಜಿಲ್ಲೆ, ಹನೂರು ತಾಲೂಕಿನ ವಡ್ಡರಪಾಳ್ಯ ಗ್ರಾಮದ ರಾಜೇಶ್ ಎಸ್. ಅಲಿಯಾಸ್ ಕುಳ್ಳ ಬಿನ್ ಸಿದ್ದಪ್ಪಾಜಿ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ನ.25 ರಂದು ಮದ್ದೂರು ಪಟ್ಟಣದ ಕಾಫೀ ಡೇ ಬಳಿ ನಂಬರ್ ಪ್ಲೇಟ್ ಇಲ್ಲದ ಮೋಟರ್ ಬೈಕ್‍ನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಎಚ್.ಕೆ. ಗುರುಪ್ರಸಾದ್, ಪರಮಾನಂದ ಬೂದಿಹಾಳ್ ಎಂಬ ಪೊಲೀಸರು ಈತನನ್ನು ಹಿಡಿದು ಬೈಕ್ ದಾಖಲೆ ನೀಡುವಂತೆ ವಿಚಾಸಿಸುತ್ತಿದ್ದಾಗ ಈತ ಬೈಕ್ ಬಿಟ್ಟು ಓಡಲು ಯತ್ನಿಸಿದ ವೇಳೆ ಬಂಧಿಸಿದರು.

ವಿಚಾರಣೆಯಲ್ಲಿ ಈತ ವಿವಿಧ ರಾಜ್ಯಗಳಲ್ಲಿ ವಿವಿಧ ಮಾದರಿಯ ಒಟ್ಟು 34 ಬೈಕ್‍ಗಳನ್ನು ಕಳವು ಮಾಡಿದ್ದು, ಇವುಗಳ ಮೌಲ್ಯ 16.40 ಲಕ್ಷ ಎಂದು ಅಂದಾಜಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಜಿಲ್ಲಾ ಪೊಲೀಸ್ ಅಧೀಕ್ಷಕ ವೇಣುಗೋಪಾಲ್ ನಿರ್ದೇಶನದ ಮೇರೆಗೆ ಮಳವಳ್ಳಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ನವೀನ್ ಕುಮಾರ್ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್‍ಪೆಕ್ಟರ್ ಸಂತೋಷ್ ನೇತೃತ್ವದಲ್ಲಿ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ನರೇಶ್ ಕುಮಾರ್, ಉಮೇಶ.ಆರ್.ಬಿ, ರವಿ.ಪಿ ಹಾಗೂ ಸಿಬ್ಬಂದಿಗಳಾದ ಗಿರೀಶ, ಗುರುಪ್ರಸಾದ್, ಪರಮಾನಂದ ಬೂದಿಹಾಳ್ ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪತ್ತೆ ಕಾರ್ಯವನ್ನು ಎಸ್‍ಪಿ ಎನ್.ಯತೀಶ್ ಶ್ಲಾಘಿಸಿದ್ದಾರೆ.

Similar News