ರಾಜ್ಯದಲ್ಲಿ 3,368 ಆ್ಯಂಬುಲೆನ್ಸ್ ಗಳಿಗೆ ಜಿಪಿಎಸ್ ಅಳವಡಿಕೆ: ಹೈಕೋರ್ಟ್ ಗೆ ಸರಕಾರ ಹೇಳಿಕೆ

Update: 2022-12-05 18:13 GMT

ಬೆಂಗಳೂರು, ಡಿ. 5: ಆ್ಯಂಬುಲೆನ್ಸ್ ಗಳ ತಡೆ ರಹಿತವಾಗಿ ಸಂಚಾರಕ್ಕೆ ಅನುವು ಮಾಡಿಕೊಡುವ ಹಿನ್ನೆಲೆಯಲ್ಲಿ ಈವರೆಗೂ ಒಟ್ಟು 3,368 ಆ್ಯಂಬುಲೆನ್ಸ್ ಗಳಿಗೆ ಜಿಪಿಎಸ್ ವ್ಯವಸ್ಥೆ ಅಳವಡಿಸಲಾಗಿದೆ ಎಂದು ಸರಕಾರ ಹೈಕೋರ್ಟ್‍ಗೆ ತಿಳಿಸಿದೆ.

ರಾಜ್ಯದಲ್ಲಿರುವ ಎಲ್ಲ ಆ್ಯಂಬುಲೆನ್ಸ್ ಗಳಿಗೆ ಜಿಪಿಎಸ್ ಅಳವಡಿಸಲು ಸರಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಭಾರತ್ ಪುನರುತ್ಥಾನ ಟ್ರಸ್ಟ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ನ್ಯಾಯಪೀಠದಲ್ಲಿ ನಡೆಯಿತು. 

ಆ್ಯಂಬುಲೆನ್ಸ್ ಗಳು ತಡೆ ರಹಿತವಾಗಿ ಸಂಚರಿಸಲು ರಾಜ್ಯದಲ್ಲಿರುವ ಎಲ್ಲ ಸರಕಾರಿ ಮತ್ತು ಖಾಸಗಿ ಆ್ಯಂಬುಲೆನ್ಸ್ ಗಳಿಗೆ ಜಿಪಿಎಸ್ ವ್ಯವಸ್ಥೆ ಅಳವಡಿಸಬೇಕು ಎಂದು ನ.8ರಂದು ಹೈಕೋರ್ಟ್ ನೀಡಿರುವ ಆದೇಶದ ಅನುಪಾಲನಾ ವರದಿಯನ್ನು ಸರಕಾರಿ ಪರ ವಕೀಲರು ಪೀಠಕ್ಕೆ ವಿವರಿಸಿದರು.

ರಾಜ್ಯದಲ್ಲಿ ಖಾಸಗಿ ಹಾಗೂ ಸರಕಾರಕ್ಕೆ ಸೇರಿದ 12,107 ಆ್ಯಂಬುಲೆನ್ಸ್ ಗಳಿವೆ. ಅವುಗಳನ್ನು ಸರಕಾರ ತಪಾಸಣೆ ನಡೆಸಿದಾಗ 3,368ಗಳಿಗೆ ಮಾತ್ರ ಜಿಪಿಎಸ್ ಅಳವಡಿಸಿರುವುದು ಕಂಡು ಬಂದಿದೆ. ಉಳಿದ ಆ್ಯಂಬುಲೆನ್ಸ್‍ಗಳಿಗೂ ಜಿಪಿಎಸ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. 

ಸಂಚರಿಸುವ ಮಾರ್ಗದ ಕುರಿತು ಸಂಚಾರ ದಟ್ಟಣೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವಂತೆ ಎಲ್ಲ  ಆ್ಯಂಬುಲೆನ್ಸ್ ಗಗಳ ಚಾಲಕರಿಗೆ ಮಾಹಿತಿ ನೀಡಲಾಗಿದೆ. ಅದಕ್ಕಾಗಿ ವಿಶೇಷ ಸಹಾಯವಾಣಿ ಸಂಖ್ಯೆ ಪ್ರಕಟಿಸಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ವಿಚಾರಣೆಯನ್ನು ಜ.11ಕ್ಕೆ ಮುಂದೂಡಿದೆ.  

Similar News