ವಿದ್ಯಾರ್ಥಿವೇತನ, ಫಲಿತಾಂಶದಲ್ಲಿ ವಿಳಂಬ: ಡಿ.17ಕ್ಕೆ ರಾಜ್ಯವ್ಯಾಪಿ ಬಂದ್‍ಗೆ ಕರೆ

Update: 2022-12-05 18:21 GMT

ಬೆಂಗಳೂರು, ಡಿ. 5: ವಿಶ್ವ ವಿದ್ಯಾನಿಲಯ ಹಾಗೂ ಸಂಯೋಜಿನ ಕಾಲೇಜುಗಳಲ್ಲಿ ವಿದ್ಯಾರ್ಥಿ ವೇತನ ವಿತರಣೆ ಮತ್ತು ಪರೀಕ್ಷಾ ಫಲಿತಾಂಶ ಪ್ರಕಟ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟವು ಡಿ.17ರಂದು ರಾಜ್ಯವ್ಯಾಪಿ ಬಂದ್‍ಗೆ ಕರೆ ಕೊಟ್ಟಿದೆ.

ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಎನ್‍ಎಸ್‍ಯುಐ ಅಧ್ಯಕ್ಷ ಕೀರ್ತಿಗಣೇಶ್, ವಿವಿಗಳಲ್ಲಿ ಸೆಮಿಸ್ಟರ್ ಪರೀಕ್ಷೆಗಳು ನಡೆದು ವರ್ಷ ಕಳೆದರೂ ಫಲಿತಾಂಶಗಳನ್ನು ನೀಡಲಾಗುತ್ತಿಲ್ಲ. ಈವರೆಗೆ ರಾಜ್ಯದಲ್ಲಿ 1 ಲಕ್ಷ ವಿದ್ಯಾರ್ಥಿಗಳಿಗೆ ಎನ್‍ಎಸ್‍ಪಿ, ಎಸ್‍ಎಸ್‍ಪಿ ವಿದ್ಯಾರ್ಥಿ ವೇತನಗಳು ಬಂದಿಲ್ಲ. ಈ ಹಿನ್ನೆಲೆ ವಿದ್ಯಾರ್ಥಿ ಧೋರಣೆಯನ್ನು ವಿರೋಧಿಸಿ ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರದಲ್ಲಿ ಬಂದ್‍ಗೆ ಕರೆ ನೀಡಬೇಕೆಂದು ಜಿಲ್ಲಾಧ್ಯಕ್ಷರಿಗೆ ಸೂಚನೆ ನೀಡಿದರು.

ವಿವಿಗಳ ವೆಬ್ರ್ಟ ಪೋರ್ಟಲ್‍ಗಳಲ್ಲಿ ಫಲಿತಾಂಶ ದಿನದ ಮುಂಚಿತವಾಗಿ, ಇಲ್ಲವೆ ಐದಾರು ದಿನದ ನಂತರದಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗುತ್ತಿದೆ. ವಿದ್ಯಾರ್ಥಿವೇತನಗಳಿಗೆ ಅರ್ಜಿ ಸಲ್ಲಿಸಲು ಅಧಿಕೃತ ಪೋರ್ಟಲ್‍ಗಳಲ್ಲಿ ನಾನಾ ಸಮಸ್ಯೆಗಳು ತಲೆದೋರಿದ್ದು, ವೆಬ್‍ಸೈಟ್‍ಗಳು ಸರಿಯಾಗಿ ನಿರ್ವಹಣೆಗೊಳ್ಳದೆ ವಿದ್ಯಾರ್ಥಿಗಳು ಬೇಸತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳಿಂದ ಮರು ಫಲಿತಾಂಶ ಶುಲ್ಕವಾಗಿ ಹೆಚ್ಚೆಚ್ಚು ಹಣವನ್ನು ವಸೂಲಿ ಮಾಡಲಾಗುತ್ತಿದೆ ವರ್ಷಕ್ಕೆ ಸಾವಿರಾರು ರೂ. ಕಾಲೇಜು ಶುಲ್ಕವನ್ನು ಏರಿಕೆ ಮಾಡಲಾಗುತ್ತಿದೆ. ಒಂದು ರೀತಿಯಲ್ಲಿ ಶಿಕ್ಷಣ ಸುಲಿಗೆಯಾಗಿ ಮಾರ್ಪಾಡಾಗುತ್ತಿರುವ ಹಿನ್ನೆಲೆ ಸರಕಾರ ಸೂಕ್ತ ಕ್ರಮ ಜರುಗಿಸಬೇಕು. ಅಲ್ಲದೆ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಉಚಿತ ಬಸ್‍ಪಾಸ್ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯವ್ಯಾಪಿ ಬಂದ್‍ಗೆ ಸಹಕರಿಸುವಂತೆ ಎಲ್ಲ ವಿಶ್ವವಿದ್ಯಾನಿಲಯಗಳಿಗೆ ಪತ್ರ ಬರೆಯಲಾಗಿದ್ದು, ಶೀಘ್ರವಾಗಿ ವಿದ್ಯಾರ್ಥಿಗಳ ಸಮಸ್ಯೆ ಬರೆಯಬೇಕು. ಯಾವುದೇ ರೀತಿಯ ಕ್ರಮಕ್ಕೆ ಸರಕಾರ ಮುಂದಾಗದಿದ್ದರೆ ವಿದ್ಯಾರ್ಥಿ ಒಕ್ಕೂಟ ಒಂದಾಗಿ ಸರಕಾರವನ್ನು ಉರುಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Similar News