'City of Joy’ ಲೇಖಕ ಡೊಮಿನಿಕ್ ಲ್ಯಾಪಿಯರ್ ನಿಧನ

Update: 2022-12-06 02:38 GMT

ಹೊಸದಿಲ್ಲಿ: ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಫ್ರಾನ್ಸ್‌ನ ಖ್ಯಾತ ಲೇಖಕ, ಕೊಲ್ಕತ್ತಾ ಬಗೆಗೆ 'City of Joy’ ಕೃತಿಯನ್ನು ರಚಿಸಿದ್ದ ಡೊಮಿನಿಕ್ ಲ್ಯಾಪಿಯರ್ (Dominique Lapierre) ತಮ್ಮ 91ನೆ ವಯಸ್ಸಿನಲ್ಲಿ ನಿಧನರಾದರು.

ಅಮೆರಿಕದ ಲೇಖಕ ಲಾರ್ರಿ ಕೊಲಿನ್ಸ್ ಜತೆ ಸೇರಿ ಡೊಮಿನಿಕ್ ಬರೆದಿದ್ದ ಆರು ಪುಸ್ತಕಗಳು 30 ಭಾಷೆಗಳಲ್ಲಿ 50 ದಶಲಕ್ಷಕ್ಕಿಂತಲೂ ಅಧಿಕ ಮಾರಾಟವಾಗಿದ್ದವು. ಇದು ಅವರ ಬರಹಗಳ ಜನಪ್ರಿಯತೆಗೆ ಸಾಕ್ಷಿ. 91ನೇ ವಯಸ್ಸಿನಲ್ಲಿ ಡೊಮಿನಿಕ್ ಕೊನೆಯುಸಿರೆಳೆದರು ಎಂದು ಪತ್ನಿ ಡೊಮಿನಿಕ್ ಕೊಂಚನ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಫ್ರಾನ್ಸ್ ಪತ್ರಿಕೆ ವರ್-ಮತಿನ್ ವರದಿ ಮಾಡಿದೆ.

ಬೆಂಗಾಳಿ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಿದ್ದ ಡೊಮಿನಿಕ್ ಲ್ಯಾಪಿಯರ್ 2008ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲೊಂದಾದ ಪದ್ಮಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದರು. ಕೊಲ್ಕತ್ತಾದ ಕೊಳಗೇರಿಗಳ ಕುಷ್ಟ ಪೀಡಿತ ಮಕ್ಕಳಿಗಾಗಿ 1981ರಲ್ಲಿ ಸಿಟಿ ಆಫ್ ಜಾಯ್ ಫೌಂಡೇಷನ್ ಸ್ಥಾಪಿಸಿದ್ದ ಅವರು, ವಿವಿಧ ಕೃತಿಗಳಿಂದ ಬಂದ ಗೌರವಧನವನ್ನು ಈ ದತ್ತಿಕಾರ್ಯಕ್ಕೆ ವಿನಿಯೋಗಿಸುತ್ತಿದ್ದರು.

1931ರ ಜುಲೈ 30ರಂದು ಜನಿಸಿದ ಡೊಮಿನಿಕ್ ಅವರ ತಂದೆ ರಾಜತಾಂತ್ರಿಕ ಅಧಿಕಾರಿ ಹಾಗೂ ತಾಯಿ ಪತ್ರಕರ್ತೆ. 17ನೇ ವಯಸ್ಸಿನಲ್ಲಿ ಕೇವಲ 30 ಡಾಲರ್‍ನೊಂದಿಗೆ ಪ್ಯಾರಿಸ್ ತೊರೆದು ಹೊರದೇಶಕ್ಕೆ ಉದ್ಯೋಗಕ್ಕಾಗಿ ತೆರಳಿ, 30 ಸಾವಿರ ಮೈಲು ದೂರದ ಉತ್ತರ ಅಮೆರಿಕಕ್ಕೆ ಬಂದಿಳಿದಿದ್ದರು.

ಈ ರೋಚಕ ಕಥನವನ್ನು ಎ ಡಾಲರ್ ಫಾರ್ ಎ ಥೌಸಂಡ್ ಮೈಲ್ಸ್ (‘A Dollar for a Thousand Miles') ಎಂಬ ಕೃತಿಯಲ್ಲಿ ಬಣ್ಣಿಸಿದ್ದರು. 1985ರಲ್ಲಿ ಸಿಟಿ ಆಫ್ ಜಾಯ್ ಕೃತಿ ರಚಿಸಿದ ಅವರು, ಕೊಲ್ಕತ್ತಾದಲ್ಲಿ ರಿಕ್ಷಾ ಎಳೆಯುವ ಶ್ರಮಿಕರ ಬದುಕನ್ನು ಇದಕ್ಕೆ ಕಥಾವಸ್ತುವಾಗಿಸಿಕೊಂಡಿದ್ದರು. ಇದನ್ನು ಆಧರಿಸಿದ ರೊನಲ್ಡ್ ಜಾಫೆ ನಿರ್ದೇಶನದ ಚಿತ್ರ ಪ್ಯಾಟ್ರಿಕ್ ಸ್ವೇಝ್ 1992ರಲ್ಲಿ ಬಿಡುಗಡೆಯಾಗಿತ್ತು ಎಂದು timesofindia.com ವರದಿ  ಮಾಡಿದೆ.

Similar News