ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ: ಕಿರುಕುಳ ಆರೋಪ

ಕಾಲೇಜು ಪ್ರಾಚಾರ್ಯರು, ಹಾಸ್ಟೆಲ್ ವಾರ್ಡನ್ ವಿರುದ್ಧ ಪ್ರತಿಭಟನೆ

Update: 2022-12-06 03:02 GMT

ಲಕ್ನೋ: ದಲಿತ ಸಮುದಾಯಕ್ಕೆ ಸೇರಿದ, ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬರು ಫಿರೋಝಾಬಾದ್ ಮೆಡಿಕಲ್ ಕಾಲೇಜಿನ ಹಾಸ್ಟೆಲ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ.

21 ವರ್ಷದ ವಿದ್ಯಾರ್ಥಿ ಶೈಲೇಂದ್ರ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಇವರು ಫಿರೋಝಾಬಾದ್‍ನ ಕೌಶಲ್ಯನಗರದವರು. ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ.

ಶನಿವಾರ ನಡೆದ ಪರೀಕ್ಷೆಗೆ ಶೈಲೇಂದ್ರ ಕುಮಾರ್ ಹಾಜರಾಗಿರಲಿಲ್ಲ. ಏಕೆ ಪರೀಕ್ಷೆ ತಪ್ಪಿಸಿಕೊಂಡಿದ್ದಾನೆ ಎಂದು ತಿಳಿಯಲು ಸ್ನೇಹಿತರು ಹಾಸ್ಟೆಲ್ ಕೊಠಡಿಗೆ ತೆರಳಿದಾಗ ಒಳಗಿನಿಂದ ಬಾಗಿಲು ಮುಚ್ಚಿರುವುದು ತಿಳಿದುಬಂತು. ಬಾಗಿಲು ಒಡೆದು ನೋಡಿದಾಗ ನೇಣು ಹಾಕಿಕೊಂಡಿರುವುದು ಕಂಡುಬಂತು. ತಕ್ಷಣ ಆಸ್ಪತ್ರೆಗೆ ಒಯ್ಯಲಾಯಿ ತಾದರೂ ಯಾವುದೇ ಪ್ರಯೋಜನವಾಗಲಿಲ್ಲ.

ಸಂತ್ರಸ್ತ ವಿದ್ಯಾರ್ಥಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಕಾಲೇಜು ವಿದ್ಯಾರ್ಥಿಗಳು ಜಿಲ್ಲಾ ಆಸ್ಪತ್ರೆ ಬಳಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು. ಕಾಲೇಜು ಪ್ರಾಚಾರ್ಯರು ಹಾಗೂ ಹಾಸ್ಟೆಲ್ ವಾರ್ಡನ್, ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ್ದಾರೆ ಎನ್ನುವುದು ಪ್ರತಿಭಟನಾಕಾರರ ಆರೋಪ.

ದಲಿತ ಎಂಬ ಕಾರಣಕ್ಕೆ ಕಾಲೇಜಿನಲ್ಲಿ ಈತನಿಗೆ ಕಿರುಕುಳ ನೀಡಲಾಗುತ್ತಿತ್ತು ಎನ್ನುವುದು ಕುಟುಂಬದವರ ಆರೋಪ. ಈ ಬಗ್ಗೆ ಹಲವು ಬಾರಿ ಪೋಷಕರಿಗೆ ಈತ ದೂರು ನೀಡಿದ್ದ. ಕಾಲೇಜಿನ ಅಕ್ರಮಗಳ ವಿರುದ್ಧ ಹಾಗೂ ಮೂಲಸೌಕರ್ಯಗಳ ಕೊರತೆ ಬಗ್ಗೆ ಧ್ವನಿ ಎತ್ತಿದ್ದಕ್ಕಾಗಿ ಈತನನ್ನು ಗುರಿ ಮಾಡಲಾಗಿತ್ತು ಎಂದು ವಿದ್ಯಾರ್ಥಿಯ ತಂದೆ ಆಪಾದಿಸಿದ್ದಾರೆ. ಕಾಲೇಜು ಆಡಳಿತ ವಿದ್ಯಾರ್ಥಿಯನ್ನು ಅಮಾನತು ಮಾಡುವುದಾಗಿ ಬೆದರಿಕೆ ಹಾಕಿತ್ತು. ಶನಿವಾರ ಮುಂಜಾನೆ ಪರೀಕ್ಷೆ ಬರೆಯಲೂ ಅವಕಾಶ ನೀಡಿರಲಿಲ್ಲ. ಇದಾದ ಸ್ವಲ್ಪ ಹೊತ್ತಿನಲ್ಲೇ ಆತ್ಮಹತ್ಯೆ ಮಾಡಿಕೊಂಡ ಎಂದು ಅವರು ಹೇಳಿದ್ದಾರೆ.

ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್ ನೀಡಲು ಕೂಡಾ ಕಾಲೇಜು ಆಡಳಿತ ನಿರಾಕರಿಸಿತ್ತು. ಕೊನೆಗೆ ಮೋಟರ್‌ ಸೈಕಲ್‍ನಲ್ಲಿ ಒಯ್ಯಲಾಯಿತು ಎಂದು ಅವರು ದೂರಿದ್ದಾರೆ. ಈ ಬಗ್ಗೆ newindianexpress.com ವರದಿ ಮಾಡಿದೆ. 

Similar News