ಕರ್ನಾಟಕ ಸೇರಲು ಸೊಲ್ಲಾಪುರದ 10 ಗ್ರಾಮ ಪಂಚಾಯತ್‌ಗಳ ನಿರ್ಣಯ: ಜಿಲ್ಲಾಧಿಕಾರಿ

ಗಡಿ ಗ್ರಾಮಗಳಲ್ಲಿ ಕನ್ನಡ ಭಾಷಿಗರು ಅಧಿಕ: ಹಕ್ಕು ಪ್ರತಿಪಾದನೆ ಮಂಡಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ

Update: 2022-12-06 03:30 GMT

ಕೊಲ್ಲಾಪುರ: ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ 10 ಗ್ರಾಮ ಪಂಚಾಯತ್‌ಗಳು ಕರ್ನಾಟಕ ಸೇರುವ ಬಗ್ಗೆ ನಿರ್ಣಯ ಆಂಗೀಕರಿಸಿರುವುದು ಕರ್ನಾಟಕ- ಮಹಾರಾಷ್ಟ್ರ ನಡುವಿನ ಗಡಿ ವಿವಾದಕ್ಕೆ ಹೊಸ ತಿರುವು ನೀಡಿದೆ ಎಂದು timesofindia.com ವರದಿ ಮಾಡಿದೆ.

ಸೊಲ್ಲಾಪುರ ಜಿಲ್ಲಾಧಿಕಾರಿ ಕಚೇರಿ ಮೂಲಕ ಈ ಪಂಚಾಯತ್‌ಗಳು ಸರ್ಕಾರಕ್ಕೆ ಮನವಿ ಸಲ್ಲಿಸಿ, ಕರ್ನಾಟಕ ಸೇರಲು ನಿರಾಕ್ಷೇಪಣ ಪತ್ರ ನೀಡುವಂತೆಯೂ ಕೋರಿವೆ. ಪಂಚಾಯತ್‌ಗಳ ನಿರ್ಣಯದ ಪ್ರತಿ ಹಾಗೂ ಅರ್ಜಿ ತಮ್ಮ ಕಚೇರಿಗೆ ತಲುಪಿದೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇವುಗಳನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ವಿವರಿಸಿದ್ದಾರೆ.

ಅಕ್ಕಲಕೋಟೆ ಗ್ರಾಮಗಳಾದ ಧಾರಸಂಗ್, ಮಂಗ್ರೂಲ್, ಅಲಗೆ, ಶವಲ್, ಕೆಗಾಂವ್, ಹಿಲ್ಲಿ, ಕೊರ್ಸೆಗಾಂವ್, ಕಲ್ಲಕರ್ಜಲ, ದೇವಿಕಾವತೆ ಮತ್ತು ಅಂಡೇವಾಡಿ ಪಂಚಾಯತ್‌ಗಳು ಈ ನಿರ್ಣಯ ಆಂಗೀಕರಿಸಿವೆ.

ಕೆಲ ದಿನಗಳ ಹಿಂದೆ ಇಂಥದ್ದೇ ನಿರ್ಣಯ ಆಂಗೀಕರಿಸಿದ ಸಾಂಗ್ಲಿ ಜಿಲ್ಲೆ ಜಾತ್ ತಾಲೂಕಿನ ಗಡಿಗ್ರಾಮಗಳ ಸಮಸ್ಯೆ ಆಲಿಸಲು ಹೊರಟಿರುವ ಮಹಾರಾಷ್ಟ್ರ ಸರ್ಕಾರಕ್ಕೆ ಹೊಸದಾಗಿ ಮತ್ತೆ 10 ಪಂಚಾಯತ್‌ಗಳು ನಿರ್ಣಯ ಆಂಗೀಕರಿಸಲು ಹೊರಟಿರುವುದು ತಲೆನೋವಾಗಿ ಪರಿಣಮಿಸಿದೆ ಎಂದು ವರದಿಯಾಗಿದೆ.

ಇತ್ತೀಚೆಗೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಜಾತ್, ಸೊಲ್ಲಾಪುರ ಹಾಗೂ ಅಕ್ಕಲಕೋಟೆ ತಾಲೂಕುಗಳ 42 ಗಡಿ ಗ್ರಾಮಗಳಲ್ಲಿ ಕನ್ನಡ ಭಾಷಿಗರು ಅಧಿಕ ಸಂಖ್ಯೆಯಲ್ಲಿ ಇರುವ ಕಾರಣ ಅದು ಕರ್ನಾಟಕಕ್ಕೆ ಸೇರಬೇಕು ಎಂಬ ಹಕ್ಕು ಪ್ರತಿಪಾದನೆ ಮಂಡಿಸಿದ್ದರು ಎಂದು timesofindia.com ವರದಿ ಮಾಡಿದೆ.

Similar News