ಕಾಂಗ್ರೆಸ್ ನೇತೃತ್ವದ ಸಂಸತ್ ಕಾರ್ಯತಂತ್ರ ಸಭೆಗೆ ಕೈಜೋಡಿಸಿದ TMC, AAP ಸೇರಿದಂತೆ 14 ಪಕ್ಷಗಳ ಮುಖಂಡರು

Update: 2022-12-08 02:26 GMT

ಹೊಸದಿಲ್ಲಿ: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷಗಳು ಚರ್ಚಿಸಬೇಕಾದ ಸಮಸ್ಯೆಗಳ ಪಟ್ಟಿಯನ್ನು ಸಿದ್ಧಪಡಿಸಲು ಮತ್ತು ಜಂಟಿ ಕಾರ್ಯತಂತ್ರವನ್ನು ರೂಪಿಸಲು ಕಾಂಗ್ರೆಸ್ ನೇತೃತ್ವದಲ್ಲಿ ಕರೆದಿದ್ದ ವಿರೋಧ ಪಕ್ಷಗಳ ಸಭೆಗೆ ತೃಣಮೂಲ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ ಕೈಜೋಡಿಸಿವೆ.

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಆಹ್ವಾನವನ್ನು ಮನ್ನಿಸಿ, ಸುಧೀರ್ಘ ಕಾಲದ ಬಳಿಕ ಈ ಕಾರ್ಯತಂತ್ರ ಸಭೆಗೆ ಉಭಯ ಪಕ್ಷಗಳ ಮುಖಂಡರು ಹಾಜರಾದರು ಎಂದು timesofindia.com ವರದಿ ಮಾಡಿದೆ.

ಟಿಎಂಸಿ, ಡಿಎಂಕೆ, ಎನ್‍ಸಿಪಿ, ಆರ್‌ಜೆಡಿ, ಶಿವಸೇನೆ, ಆರ್‌ಎಲ್‍ಡಿ, ಎಡಪಕ್ಷಗಳು ಮತ್ತು ಆಮ್ ಆದ್ಮಿ ಪಾರ್ಟಿ (TMC, DMK, NCP, RJD, Shiv Sena, RLD, Left parties and AAP) ಸೇರಿದಂತೆ 14 ಪಕ್ಷಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

ಅಧಿವೇಶನದಲ್ಲಿ ಭಾರತ- ಚೀನಾ ಗಡಿ ವಿವಾದ, ಹಣದುಬ್ಬರ, ನಿರುದ್ಯೋಗ ಮತ್ತು ದುರ್ಬಲಗೊಳ್ಳುತ್ತಿರುವ ಆರ್ಥಿಕ ಸ್ಥಿತಿ, ನ್ಯಾಯಾಂಗದ ಮೇಲೆ ಕೇಂದ್ರದ ಪ್ರಹಾರ, ಹಕ್ಕು ಆಧಾರಿತ ಕಾನೂನುಗಳನ್ನು ದುರ್ಬಲಗೊಳಿಸಿರುವುದು, ಆರ್ಥಿಕವಾಗಿ ಹಿಂದುಳಿದವರಿಗೆ ಮಿಸಲಾತಿ, ಸ್ವಾಯತ್ತ ಸಂಸ್ಥೆಗಳ ಪತನ, ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಕುಸಿಯುತ್ತಿರುವುದು, ಸಿಬಿಐನಂಥ ಏಜೆನ್ಸಿಗಳ ದುರ್ಬಳಕೆ, ಹೆಚ್ಚುತ್ತಿರುವ ಕೋಮು ಧ್ರುವೀಕರಣ ಹಾಗೂ ದ್ವೇಷಭಾಷಣ ವಿಷಯಗಳನ್ನು ಚರ್ಚಿಸಲು ನಿರ್ಧರಿಸಲಾಗಿದೆ.

"ಸಂಸತ್ತು ಪ್ರಜಾಸತ್ತಾತ್ಮಕ ನಡವಳಿಗಳ ಕೇಂದ್ರ. ಸಮಾನ ಮನಸ್ಕ ಪಕ್ಷಗಳ ಮುಖಂಡರಾದ ನಾವು ನಮ್ಮ ಜನತೆಗೆ ಪ್ರಸ್ತುತ ಎನಿಸುವ ವಿಷಯಗಳನ್ನು ಪ್ರಬಲವಾಗಿ ಪ್ರತಿಪಾದಿಸಲಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರೇ, ವಿರೋಧ ಪಕ್ಷಗಳು ಹೆಚ್ಚು ಪಾಲ್ಗೊಳ್ಳಲು ಅವಕಾಶ ನೀಡುವ ಬಗ್ಗೆ ನೀವು ಮಾತನಾಡಿದ್ದೀರಿ. ಸರ್ಕಾರ ತನ್ನ ಮಾತಿಗೆ ತಕ್ಕಂತೆ ನಡೆದುಕೊಳ್ಳುತ್ತದೆ ಎಂಬ ನಿರೀಕ್ಷೆ ನಮ್ಮದು" ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ.

Similar News