ದೆಹಲಿ ಪಾಲಿಕೆ ಚುನಾವಣೆ; 57 ಸಾವಿರಕ್ಕೂ ಅಧಿಕ ಮಂದಿ ನೋಟಾ ಚಲಾವಣೆ: ಚುನಾವಣಾ ಆಯೋಗ

Update: 2022-12-08 02:37 GMT

ಹೊಸದಿಲ್ಲಿ: ಹದಿನೈದು ವರ್ಷಗಳ ಬಿಜೆಪಿ ಆಡಳಿತವನ್ನು ಅಂತ್ಯಗೊಳಿಸಿದ ದೆಹಲಿ ಪಾಲಿಕೆ ಚುನಾವಣೆಯಲ್ಲಿ 57 ಸಾವಿರ ಮಂದಿ ನೋಟಾ (None of the Above) ಹಕ್ಕು ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗ ಬುಧವಾರ ಬಹಿರಂಗಪಡಿಸಿದ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಕಳೆದ ರವಿವಾರ ನಡೆದ ದೆಹಲಿ ಪಾಲಿಕೆ ಚುನಾವಣೆಯಲ್ಲಿ ಶೇಕಡ 50.48 ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು. 1,45,05,358 ಮಂದಿ ಒಟ್ಟು ಮತದಾರರಿದ್ದರು.

ಚಲಾವಣೆಯಾದ ಮತಗಳ ಪೈಕಿ 57,545 ಮಂದಿ (ಶೇಕಡ 0.78ರಷ್ಟು) ನೋಟಾ ಚಲಾಯಿಸಿದ್ದಾರೆ. 250 ಸದಸ್ಯ ಬಲದ ಪಾಲಿಕೆಯಲ್ಲಿ 134 ಸ್ಥಾನಗಳನ್ನು ಗೆಲ್ಲುವ ಮೂಲಕ ಹದಿನೈದು ವರ್ಷಗಳಲ್ಲಿ ಮೊದಲ ಬಾರಿಗೆ ಆಮ್ ಆದ್ಮಿ ಪಕ್ಷ ಸೋಲಿನ ರುಚಿ ತೋರಿಸಿದೆ.

2022ರ ಎಂಸಿಡಿ ಚುನಾವಣೆಯಲ್ಲಿ ಗರಿಷ್ಠ ಅಂದರೆ ಶೇಕಡ 65.72ರಷ್ಟು ಮತಗಳು ಭಕ್ತಾವರಪುರ ವಾರ್ಡ್‍ನಲ್ಲಿ (ವಾರ್ಡ್ ನಂ. 5) ಚಲಾವಣೆಯಾಗಿದ್ದರೆ, ಆಂಡ್ರೂಸ್ ಗಂಜ್ (ವಾರ್ಡ್ ನಂ. 145) ವಾರ್ಡ್‍ನಲ್ಲಿ ಕನಿಷ್ಠ ಅಂದರೆ ಶೇಕಡ 33.74ರಷ್ಟು ಮತ ಚಲಾವಣೆಯಾಗಿತ್ತು ಎಂದು ndtv.com ವರದಿ ಮಾಡಿದೆ. 

Similar News